ಸುವರ್ಣಪುರ(ಒಡಿಶಾ):ಜಿಲ್ಲೆಯಲ್ಲಿ 80 ವರ್ಷದ ವೃದ್ಧೆಯೊಬ್ಬರು 20 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಾರೆ. ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಂಭೀರ ಸ್ಥಿತಿಯಲ್ಲಿ ವೃದ್ಧೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸುವರ್ಣಪುರ ಜಿಲ್ಲೆಯ ಕೆಕುಫುಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಾಹಿತಿ ಪ್ರಕಾರ, ಸುವರ್ಣಪುರ ಜಿಲ್ಲೆಯ ಗೋಬಿಂದಪುರ ಗ್ರಾಮದಲ್ಲಿ ತನ್ನ ಮಗಳ ಮನೆಗೆ ಸಂತ್ರಸ್ತೆ ದುಖಿ ನಾಯ್ಕ್ ಬಂದಿದ್ದರು. ಸೋಮವಾರ ಸೋನ್‌ಪುರ ಬುರ್ದಾ ರಸ್ತೆಯ ಕನೆಫುಲ್ ಗ್ರಾಮಕ್ಕೆ ಕಸಬರಿಕೆ ತಯಾರಿಸಲು ಗರಿಗಳನ್ನು ಹಾರಿಸಲು ತೆರಳಿದ್ದರು. ಅಷ್ಟರಲ್ಲಿ ಅಲ್ಲಿಯೇ ಇದ್ದ ಬೋರ್‌ವೆಲ್‌ಗೆ ಬಿದ್ದಿದ್ದಾರೆ. ಈ ಸಂಗತಿ ಯಾರಿಗೂ ತಿಳಿದಿರಲಿಲ್ಲ.
ವೃದ್ಧೆ ನಾಪತ್ತೆಯಾದ ಕಾರಣ ಸಂಬಂಧಿಕರು ಮತ್ತು ಸ್ಥಳೀಯರು ರಾತ್ರಿಯಿಡೀ ಹುಡುಕಿದರು ಪ್ರಯೋಜನವಾಗಿರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಬೋರ್‌ವೆಲ್‌ನಲ್ಲಿ ಆಕೆ ಪತ್ತೆಯಾಗಿದ್ದು, ಕೂಡಲೇ ಅಗ್ನಿಶಾಮಕ ಸೇವೆಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿತು.
ಇನ್ನು ವೃದ್ಧೆಗೆ ಕಿವಿ ಕೇಳಿಸುವುದಿಲ್ಲವಂತೆ. ಅಷ್ಟೇ ಅಲ್ಲ ಅಜ್ಜಿಗೆ ಮಾತನಾಡಲು ಸಹ ಸಾಧ್ಯವಾಗುವುದಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ರಕ್ಷಣಾ ತಂಡವು ವೃದ್ಧೆಯ ಉಸಿರಾಟಕ್ಕೆ ಸಹಾಯ ಮಾಡಲು ಬೋರ್‌ವೆಲ್‌ಗೆ ಆಮ್ಲಜನಕವನ್ನು ಪೂರೈಸಿತ್ತು. ಆಕೆಯನ್ನು ಬೋರ್ವೆಲ್ನಿಂದ ಹೊರಗೆ ತರಲು ಬೋರ್‌ವೆಲ್ ಪಕ್ಕದಲ್ಲಿ ಜೆಸಿಬಿ ಮೂಲಕ ಭೂಮಿಯನ್ನು ಅಗೆಯಲಾಯಿತು. ಸುಮಾರು 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ವೃದ್ಧೆಯನ್ನು ರಕ್ಷಿಸಲಾಗಿದೆ.