ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಂಡಿನ ಸದ್ದು ಸಂಚಲನ ಮೂಡಿಸಿದೆ. ದ್ವಾರಕಾ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಂ ನಗರದಲ್ಲಿ ವಾಸಿಸುತ್ತಿದ್ದ ಮಾವನನ್ನು ಸೋದರಳಿಯನೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ತಡರಾತ್ರಿ ಕೊಲೆ ನಡೆದಿದ್ದು, ಈ ಘಟನೆ ಬಗ್ಗೆ ಬೆಳಗ್ಗೆ 7.30 ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಮೃತನನ್ನು 62 ವರ್ಷದ ಅಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಸ್ಥಳದಿಂದ ಬುಲೆಟ್ ಅನ್ನು ಪತ್ತೆ ಮಾಡಲಾಗಿದೆ. ಅಜಿತ್ ಸಿಂಗ್ ತಮ್ಮ ಮನೆಯ ಹೊರಗೆ ಮಲಗಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಆತನ ತಲೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಡಿಸಿಪಿ ಸಂತೋಷ್ ಮೀನಾ ಹೇಳಿದ್ದಾರೆ.
ಮೊದಲ ಘಟನೆಯನ್ನು ಪಾಲಂ ಪೊಲೀಸ್ ಠಾಣೆಯ ಪೊಲೀಸರಿಗೆ ವರದಿ ಮಾಡಲಾಗಿತ್ತು. ನಂತರ ಇದು ದ್ವಾರಕಾ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ತಿಳಿದು ಬಂದಿದೆ. ದ್ವಾರಕಾ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಈ ಬಗ್ಗೆ ತನಿಖೆ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಅಜಿತ್ ಸಿಂಗ್ ಮಲಗಿದ್ದ ಮನೆಯಲ್ಲಿ ರಿಪೇರಿ ನಡೆಯುತ್ತಿತ್ತು. ಈ ವಿಷಯಕ್ಕೆ ಮಾವ ಅಜಿತ್ ಸಿಂಗ್ ಮತ್ತು ಸೋದರಳಿಯ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ನಿಮ್ಮನ್ನು ಕೊಲ್ಲುವುದಾಗಿ ಸೋದರಳಿಯ ಬೆದರಿಕೆ ಹಾಕಿದ್ದನು ಎಂದು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಹರಿನಗರದ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.