ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಆರ್ಥಿಕ ಸಂಕಷ್ಟದಿಂದ 62 ವರ್ಷದ ವ್ಯಕ್ತಿಯೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ್ದಾರೆ. ನಂತರ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ, ಸಾವಿಗೂ ಮುನ್ನ ಡೆತ್ ನೋಟ್ ಸಹ ಬರೆದಿಟ್ಟಿದ್ದಾರೆ.
ರಾಜಧಾನಿ ಕೋಲ್ಕತ್ತಾ ಸಮೀಪದ ಜಾದವಪುರದ ಚಿತ್ತರಂಜನ್ ಕಾಲೋನಿಯಲ್ಲಿ ಶುಕ್ರವಾರ ಈ ದುರಂತ ನಡೆದಿದೆ. ಮೃತರನ್ನು ಬೈದ್ಯನಾಥ್ ಪ್ರಸಾದ್ (62) ಮತ್ತು ಅವರ ಪತ್ನಿ ಜಾಲಿ ಪ್ರಸಾದ್ (57) ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಬಿಲ್ ಪಾವತಿಸಲು ತೊಂದರೆ: ಖಾಸಗಿ ಕಂಪನಿಯೊಂದರಲ್ಲಿ ಚಾಲಕರಾಗಿ ಬೈದ್ಯನಾಥ್ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರ ದೃಷ್ಟಿ ನಷ್ಟವಾಗಿತ್ತು. ಇದರಿಂದಾಗಿ ತಮ್ಮ ಕೆಲಸವನ್ನೂ ಕಳೆದುಕೊಂಡಿದ್ದರು. ಮತ್ತೊಂದೆಡೆ, ಜಾಲಿ ಪ್ರಸಾದ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ, ಕಳೆದುಕೊಂಡ ಬಳಿಕ ಈ ದಂಪತಿಗೆ ಜೀವನ ನಡೆಸುವುದೆ ಕಷ್ಟಕರವಾಗಿತ್ತು.
ಅಲ್ಲದೇ, ಮನೆಯ ವೆಚ್ಚವನ್ನು ಭರಿಸುವುದೂ ಬೈದ್ಯನಾಥ್ ಪ್ರಸಾದ್ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಪತ್ನಿಯ ಕಿಮೋಥೆರಪಿ ವೆಚ್ಚಗಳು ಮತ್ತು ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಇದರ ಪರಿಣಾಮವಾಗಿ ಮನೆಯಲ್ಲೇ ಬೈದ್ಯನಾಥ್ ತಮ್ಮ ಪತ್ನಿಯನ್ನು ಕೊಲೆ ಮಾಡಿದ್ದಾರೆ. ಬಳಿಕ ಅವರೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.