ಪೂರ್ಣಿಯಾ (ಬಿಹಾರ):ಮಲಗಿದ್ದಾಗ ವೃದ್ಧ ಹಾಗೂ ಓರ್ವ ಬಾಲಕನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. ಜಾಮೀನು ವಿವಾದ ಹಿನ್ನೆಲೆಯಲ್ಲಿ ವೃದ್ಧನ ಹಿರಿಯ ಮಗನೇ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಜಿಲ್ಲೆಯ ಬದರಾ ಕೋಠಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲಾಂಬಾಗ್ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ಕ್ಷತ್ರಿಯ ಮಂಡಲ್ ಮತ್ತು ಮೊಮ್ಮಗ ಮನೀಶ್ (8) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮೃತ ವೃದ್ಧನ ಕಿರಿಯ ಮಗ ಅಖಿಲೇಶ್, ಮನೆಯ ವರಾಂಡದಲ್ಲಿ ರಾತ್ರಿ ತನ್ನ ತಂದೆ ಮತ್ತು ಮಗ ಮಲಗಿದ್ದರು. ಈ ವೇಳೆ, ಮೂವರು ಅಪರಿಚಿತರು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ತಂದೆ ಸಹ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅಖಿಲೇಶ್, ತನ್ನ ಅಣ್ಣ ಅಶೋಕ್ ಎಂಬಾತನೇ ಈ ಕೊಲೆಗಳನ್ನು ಮಾಡಿರುವ ಶಂಕೆ ಇದೆ. ಈತ ಪಂಜಾಬ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ನಮ್ಮ ಮಧ್ಯೆ ಜಮೀನು ವಿವಾದ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಅಶೋಕ್ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಸಿ ಅದೇ ರಾತ್ರಿ ಪಂಜಾಬ್‌ಗೆ ತೆರಳಿದ್ದ. ಸೋಮವಾರ ತಡರಾತ್ರಿ ಆತ ತನ್ನ ಕೆಲವು ಸಹಚರರನ್ನು ಕಳುಹಿಸಿ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದರು.