ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶಿವಸೇನೆಯ ವಿರುದ್ಧ ಬಂಡಾಯವೇಳಲು ಕಾರಣವೇನು ಎಂಬ ಬಗ್ಗೆ ಶಾಸಕ ಆದಿತ್ಯ ಠಾಕ್ರೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಂಡಾಯದ ಮೊದಲು ಏಕನಾಥ್ ಅಳುತ್ತ ಮಾತೋಶ್ರಿಗೆ ಬಂದಿದ್ದರು. 40 ಶಾಸಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ಮತ್ತು ಹಣಕ್ಕಾಗಿ ಆ ಕಡೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದರು. ಅಲ್ಲದೆ ತಾವು ಬಂಧನವಾಗದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಜೆಪಿಯೊಂದಿಗೆ ಹೋಗುತ್ತಿರುವುದಾಗಿ ಅವರು ಹೇಳಿದ್ದರು ಎಂದು ಆದಿತ್ಯ ಆರೋಪಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಏಕನಾಥ್ ಶಿಂಧೆ ಅವರು 40 ಕ್ಕೂ ಹೆಚ್ಚು ಶಾಸಕರೊಂದಿಗೆ ಬಂಡಾಯ ಸಾರಿದ್ದರು ಮತ್ತು ಅಂತಿಮವಾಗಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿದ್ದರು ಎಂಬುದು ಗಮನಾರ್ಹ.
ಏಕನಾಥ್ ಶಿಂಧೆ ಗುಂಪು ನಮ್ಮಿಂದ ಎಲ್ಲವನ್ನೂ ಕದಿಯಲು ಪ್ರಯತ್ನಿಸಿದೆ. ಅವರು ನಮ್ಮ ಪಕ್ಷದ ಲೋಗೋ ಮತ್ತು ಪಕ್ಷದ ಹೆಸರನ್ನು ಕದಿಯಲು ಪ್ರಯತ್ನಿಸಿದ್ದಾರೆ. ಅವರು ಏನು ಸಾಧ್ಯವೋ ಅದೆಲ್ಲವನ್ನೂ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಾಸ್ತವ ಸಂಗತಿಯೆಂದರೆ ಎಲ್ಲದರೊಂದಿಗೆ ಓಡಿಹೋದ ವ್ಯಕ್ತಿಯನ್ನು ಕಳ್ಳ ಎಂದು ಮಾತ್ರ ಹೇಳಲು ಸಾಧ್ಯ. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಆದಿತ್ಯ ಠಾಕರೆ ಹೇಳಿದರು. ಹೈದರಾಬಾದ್‌ನಲ್ಲಿ GITAM (ಡೀಮ್ಡ್ ಟು ಬಿ ಯೂನಿವರ್ಸಿಟಿ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಆದಿತ್ಯ ಠಾಕ್ರೆ ಮಾತನಾಡಿದರು.