ಶ್ರೀನಗರ: ಕಣಿವೆಯ ಅತಿದೊಡ್ಡ ಪತ್ರಕರ್ತರ ಸಂಘವಾದ ಕಾಶ್ಮೀರ ಪ್ರೆಸ್ ಕ್ಲಬ್‌ನ ಕಚೇರಿ ಮತ್ತು ಆಡಳಿತವನ್ನು ಜನವರಿ 15ರಂದು ಸಶಸ್ತ್ರ ಪೊಲೀಸರ ಸಹಾಯದಿಂದ ಪತ್ರಕರ್ತರ ಗುಂಪೊಂದು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಕ್ರಮಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ದಿಗ್ಭ್ರಮೆಗೊಂಡಿದೆ.
ಮೇ 2021ರಲ್ಲಿ ಅರ್ಜಿಯ ಪರಿಶೀಲನೆಯ ದೀರ್ಘ ಪ್ರಕ್ರಿಯೆಯ ನಂತರ ಕ್ಲಬ್‌ಗೆ ಡಿಸೆಂಬರ್ 29, 2021 ರಂದು ಹೊಸ ಮರು ನೋಂದಣಿ ನೀಡಲಾಗಿತ್ತು. ಆದರೆ, ಈ ಕ್ಲಬ್ ಮರು ನೋಂದಣಿ ನಂತರ ಮಧ್ಯಂತರ ನಿರ್ವಹಣೆಯಲ್ಲಿತ್ತು ಹಾಗೂ ಜನವರಿ 13, 2022ರಂದು ಹೊಸ ನಿರ್ವಹಣಾ ಸಂಸ್ಥೆ ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲು ದಿನಾಂಕ ಘೊಷಣೆ ಮಾಡಲಾಗಿತ್ತು. ಅದರಂತೆ ಫೆಬ್ರವರಿ 15, 2022ರಂದು ಚುನಾವಣಾ ದಿನಾಂಕವನ್ನೂ ಘೋಷಿಸಿತ್ತು.
ಸಶಸ್ತ್ರ ಪಡೆಯಿಂದ ಆದ ಈ ಸ್ವಾಧೀನವು ಕ್ಲಬ್‌ನ ನಿಯಮ ಆಧಾರಿತ ಕಾರ್ಯಚಟುವಟಿಕೆಯನ್ನು ಪರಿಣಾಮಕಾರಿಯಾಗಿ ತಡೆದಿದೆ. ಗೊಂದಲದ ಸಂಗತಿಯೆಂದರೆ, ರಾಜ್ಯ ಪೊಲೀಸರು ಯಾವುದೇ ವಾರೆಂಟ್ ಅಥವಾ ದಾಖಲೆಗಳಿಲ್ಲದೆ ಆವರಣವನ್ನು ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಲತಾ ಮಂಗೇಶ್ಕರ್ ಸ್ಥಿತಿ ಸ್ಥಿರವಾಗಿದೆ: ಡಾ. ಪ್ರತಿಮ್
ಪೊಲೀಸರು ಮತ್ತು ಸ್ಥಳೀಯ ಆಡಳಿತದ ಈ ಉಲ್ಲಂಘನೆಯು ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿರಂತರ ಪ್ರವೃತ್ತಿಯ ದ್ಯೋತಕವಾಗಿದೆ ಎಂದು ಕರೆಯಲಾಗಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೇವಲ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಯುವ ಪತ್ರಕರ್ತ ಸಾಜದ್ ಗುಲ್ ಅನ್ನು ಬಂಧಿಸಲಾಗಿತ್ತು.