ಕೋಲ್ಕತ್ತಾ: ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಷಹಜಹಾನ್ ಶೇಖ್ ಎಂಬಾತನ ನಿವಾಸದ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ಭದ್ರತಾ ಪಡೆಗಳ ತಂಡದ ಮೇಲೆಯೇ ಆತನ ಬೆಂಬಲಿಗರು ದಾಳಿ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಂದು ನಡೆದಿದೆ.
ಇಲ್ಲಿನ ಸಂದೇಶಖಾಲಿ ಬ್ಲಾಕ್ 1ರಲ್ಲಿರುವ ಶೇಖ್ ಷಹಜಹಾನ್ ಮನೆಗೆ ಅಧಿಕಾರಿಗಳ ತಂಡ ತೆರಳಿತ್ತು. ಅಧಿಕಾರಿಗಳು ಹಲವು ಬಾರಿ ಮನೆ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಮನೆ ಬೀಗ ಮುರಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಷಹಜಹಾನ್ ಬೆಂಬಲಿಗರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಘರ್ಷ ತಾರಕಕ್ಕೇರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಇಡಿ ಹಾಗೂ ಕೇಂದ್ರ ಸಶಸ್ತ್ರ ಪಡೆಗಳ ವಾಹನಗಳನ್ನೂ ಧ್ವಂಸಗೊಳಿಸಲಾಗಿದೆ.
ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ. ಕ್ಯಾಮರಾ, ವಾಹನಗಳು ಹಾಗೂ ಇತರ ಉಪಕರಣಗಳನ್ನು ಒಡೆದು ಹಾಕಲಾಗಿದೆ. ಇಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಮಾಧ್ಯಮದವರು ಘಟನಾ ಸ್ಥಳದಿಂದ ತೆರಳಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದ ಕೋಲ್ಕತ್ತಾ ಹಾಗೂ ಉತ್ತರ 24 ಪರಗಣ ಜಿಲ್ಲೆಯ ಹಲವು ಪ್ರದೇಶಗಳೂ ಸೇರಿದಂತೆ ಒಟ್ಟು 12 ಸ್ಥಳಗಳಲ್ಲಿ ಇಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿದ್ದವು. ಬಂಗಾವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಖರ್ ಅಧ್ಯ ಎಂಬವರ ಮನೆ, ಸಹೋದರನ ಐಸ್ಕ್ರೀಂ ಕಾರ್ಖಾನೆ ಹಾಗೂ ಅತ್ತೆಯ ಮನೆಯಲ್ಲೂ ಇಡಿ ಶೋಧ ಕೈಗೊಂಡಿದೆ.
ಈ ಕುರಿತ ವಿಡಿಯೋವನ್ನು ಬಂಗಾಳ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗಟ್ಟಿದೆ. ಈ ಘಟನೆಯನ್ನು ಕೇಂದ್ರ ಗೃಹ ಸಚಿವರು ಹಾಗೂ ಇತರ ಸಂಬಂಧಿತ ಅಧಿಕಾರಿಗಳು ಗಮನಿಸಬೇಕು. ಇಂಥದ್ದನ್ನು ಹತ್ತಿಕ್ಕಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಏನಿದು ಪ್ರಕರಣ?: ಕೋವಿಡ್- 19 ಅವಧಿಯಲ್ಲಿ ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ 2022ರಲ್ಲಿ ಎಫ್ಐಆರ್ ದಾಖಲಿಸಿದೆ. 2023ರ ಅಕ್ಟೋಬರ್ನಲ್ಲಿ ಟಿಎಂಸಿ ನಾಯಕ ಹಾಗೂ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಹಾಗೂ ಅವರ ಆಪ್ತ ಉದ್ಯಮಿ ಬಾಕಿಬುರ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮಲ್ಲಿಕ್ ಸಹಚರರನ್ನು ಇಡಿ ವಿಚಾರಣೆ ನಡೆಸಿತ್ತು. ಷಹಜಹಾನ್ ಶೇಖ್ ಅವರು ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿಟಕವರ್ತಿ ಎಂದು ಇಡಿ ಹೇಳಿದೆ.
ಇದನ್ನೂ ಓದಿ:ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: 2ನೇ ಚಾರ್ಜ್ ಶೀಟ್ ಸಲ್ಲಿಸಿದ ಇಡಿ