ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಎರಡನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ (ಜೆಕೆಸಿಎ) ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಶ್ರೀನಗರದಲ್ಲಿರುವ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.
86 ವರ್ಷದ ಹಿರಿಯ ರಾಜಕಾರಣಿ ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಇವರ ಅಧಿಕಾರವಧಿಯಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಅಕ್ರಮವಾಗಿ ಹಣದ ವರ್ಗಾವಣೆ ನಡೆದಿದೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದರು. 2022ರಲ್ಲಿ ದಾಖಲಿಸಲಾದ ಚಾರ್ಜ್ಶೀಟ್ನಲ್ಲಿ ಫಾರೂಖ್ರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಕ್ರಿಕೆಟ್ ಸಂಸ್ಥೆಯ ಅನುದಾನವನ್ನು ಪದಾಧಿಕಾರಿಗಳ ಬ್ಯಾಂಕ್ ಖಾತೆ ಸೇರಿ, ಅಪರಿಚಿತ ವ್ಯಕ್ತಿಗಳ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಯಾವುದೇ ಕಾರಣಗಳಿಲ್ಲದೇ, ಹಣ ವರ್ಗಾವಣೆ ಮಾಡಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಇಡಿ ಚಾರ್ಜ್ಶೀಟ್ನಲ್ಲಿ ಆರೋಪಿಸಿದೆ.
ಸಿಬಿಐ, ಇಡಿ ಸಂಸ್ಥೆಗಳಿಂದ ತನಿಖೆ:ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಫಾರೂಕ್ ಅಬ್ದುಲ್ಲಾ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಆರೋಪವೂ ಅವರ ಮೇಲಿದೆ. ಫಾರೂಖ್ ಅವರು 2001ರಿಂದ 2012ರವರೆಗೆ ಜೆಕೆಸಿಎ ಅಧ್ಯಕ್ಷರಾಗಿದ್ದರು. ಈ ವೇಳೆ ಅನುದಾನವನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) 2018ರಲ್ಲಿ ತನಿಖೆ ನಡೆಸಿ ಚಾರ್ಜ್ಶೀಟ್ ದಾಖಲಿಸಿದೆ. ಇದೇ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಇಡಿ ವಿಚಾರಣೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿತ್ತು.
ಇಡಿ ಅಧಿಕಾರಿಗಳ ಮೇಲೆ ದಾಳಿ:ಪಶ್ಚಿಮ ಬಂಗಾಳದಲ್ಲಿ ಇಡಿ ಅಧಿಕಾರಿಗಳ ಮೇಲೆಯೇ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಷಹಜಹಾನ್ ಶೇಖ್ ಎಂಬವರ ನಿವಾಸದ ಮೇಲೆ ದಾಳಿ ನಡೆಸಲು ತೆರಳಿದ್ದ ಇಡಿ ಮತ್ತು ಕೇಂದ್ರ ಭದ್ರತಾ ಪಡೆ ತಂಡದ ಮೇಲೆಯೇ ಉದ್ರಿಕ್ತರು ದಾಳಿ ಮಾಡಿದ್ದರು. ಜೊತೆಗೆ ಮಾಧ್ಯಮದವರ ಮೇಲೂ ಹಲ್ಲೆ ನಡೆಸಲಾಗಿತ್ತು. ಕ್ಯಾಮರಾ, ವಾಹನಗಳು ಹಾಗೂ ಇತರ ಉಪಕರಣಗಳನ್ನು ಒಡೆದು ಹಾಕಲಾಗಿತ್ತು. ಇದರಿಂದ ಇಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಮಾಧ್ಯಮದವರು ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ತನಿಖಾ ಸಂಸ್ಥೆಯ ಮುಖ್ಯಸ್ಥರೇ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿ: ಕ್ರಮದ ಎಚ್ಚರಿಕೆ ನೀಡಿದ ರಾಜ್ಯಪಾಲ