ನವದೆಹಲಿ:ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವಿಚಾರಣೆ ನಡೆಸಿದ್ದು, ಇದರ ಬೆನ್ನಲ್ಲೇ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಮನ್ಸ್ ನೀಡಿದೆ. ಇದೇ ವಿಚಾರವಾಗಿ ಸಂಸತ್ನಲ್ಲಿ ಖರ್ಗೆ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಧ್ಯೆ ವಾಗ್ವಾದ ನಡೆಯಿತು.
ಸಂಸತ್ನ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನನಗೆ ಸಮನ್ಸ್ ನೀಡಲು ಹೇಗೆ ಸಾಧ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ಸರ್ಕಾರ ದೇಶದಲ್ಲಿರುವ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ದೆಹಲಿಯಲ್ಲಿರುವ ಹೆರಾಲ್ಡ್ ಹೌಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಪ್ರತಿನಿಧಿಯಾಗಿದ್ದು, ಇದೀಗ ಜಾರಿ ನಿರ್ದೇಶನಾಲಯ ಅವರಿಗೆ ಸಮನ್ಸ್ ನೀಡಿದೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ವಿಚಾರಣೆಗೋಸ್ಕರ ನನ್ನನ್ನು ಹೇಗೆ ಕರೆಯುತ್ತಾರೆ? ನಾನು ಮಧ್ಯಾಹ್ನ 12.30 ಕ್ಕೆ ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕು. ಕಾನೂನನ್ನು ಅನುಸರಿಸಲು ಬಯಸುತ್ತೇನೆ. ಆದರೆ ಈ ಸಮಯದಲ್ಲಿ ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ಕರೆಯುವುದು ಸೂಕ್ತವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಭಯವಿದೆ ಎಂದರು.