ಕರ್ನಾಟಕ

karnataka

ETV Bharat / bharat

ದೆಹಲಿ ಅಬಕಾರಿ ಹಗರಣ: ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ನಾಲ್ಕನೇ ಸಲ ಇಡಿ ಸಮನ್ಸ್ - delhi cm Aravind Kejriwal

ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಶನಿವಾರ ನಾಲ್ಕನೇ ಬಾರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.

ದೆಹಲಿ ಅಬಕಾರಿ ಹಗರಣ
ದೆಹಲಿ ಅಬಕಾರಿ ಹಗರಣ

By ETV Bharat Karnataka Team

Published : Jan 13, 2024, 9:40 AM IST

ನವದೆಹಲಿ:ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ವಿಚಾರಣೆಗೆ ಹಾಜರಾಗಲು ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ 4ನೇ ಬಾರಿಗೆ ಸಮನ್ಸ್​ ಜಾರಿ ಮಾಡಿದೆ. ತಮ್ಮ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ವಿಚಾರಣೆಗಾಗಿ ಜನವರಿ 18 ರಂದು ದಿಲ್ಲಿಯ ಇಡಿ ಕಚೇರಿಗೆ ಬರಲು ಸಮನ್ಸ್​ನಲ್ಲಿ ಸೂಚಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಸಿಎಂಗೆ ಈ ಹಿಂದೆ ಮೂರು ಬಾರಿ ಸಮನ್ಸ್​ ಜಾರಿ ಮಾಡಲಾಗಿದೆ. ಆದರೆ, ಅವರು ಒಮ್ಮೆಯೂ ವಿಚಾರಣೆಗೆ ಹಾಜರಾಗಿಲ್ಲ. ಕೆಲವು ದಿನಗಳ ಹಿಂದೆ ತಮ್ಮನ್ನು ಬಂಧಿಸಲು ಇಡಿ ಯೋಜಿಸಿದೆ ಎಂದು ಕೇಜ್ರಿವಾಲ್​ ಆರೋಪಿಸಿ, ತಾವಿದ್ದ ಸಿಎಂ ಕಚೇರಿಗೆ ಭಾರೀ ಭದ್ರತೆ ಒದಗಿಸಿದ್ದರು.

ಕೇಜ್ರಿವಾಲ್​ ವಿರೋಧವೇನು?:ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿ ಲೋಕಸಭೆ ಚುನಾವಣೆಯಿಂದ ದೂರ ಇಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಹೀಗಾಗಿ ಇಡಿಯನ್ನು ತಮ್ಮ ವಿರುದ್ಧ ಬಿಡಲಾಗಿದೆ ಎಂಬುದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಆರೋಪ. ಆದರೆ, ಈಗಾಗಲೇ ಪ್ರಕರಣದಲ್ಲಿ ಆಪ್​ನ ಸಚಿವರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿದೆ ಎಂದು ಇಡಿ ಆರೋಪಿಸಿದೆ. ಹೀಗಾಗಿ ವಿಚಾರಣೆ ಎದುರಿಸಲು ಸಮನ್ಸ್​ ಜಾರಿ ಮಾಡಲಾಗಿದೆ.

ಸಮನ್ಸ್​ ವಿರುದ್ಧವೇ ಆಕ್ರೋಶ:ತಮ್ಮ ವಿರುದ್ಧ ಜಾರಿ ಮಾಡಲಾದ ಸಮನ್ಸ್​ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಕೇಜ್ರಿವಾಲ್​ ಕಿಡಿಕಾರಿದ್ದಾರೆ. ಇಡಿ ಕಳುಹಿಸಿರುವ ಸಮನ್ಸ್​ ಅನ್ನು ಹಿಂಪಡೆಯಬೇಕು. ತಾವು ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ಬದುಕುತ್ತಿದ್ದು, ಮುಚ್ಚಿಡಲು ತಮ್ಮ ಬಳಿ ಏನೂ ಇಲ್ಲ. ಅಲ್ಲದೇ ಯಾವುದೇ ಸಮನ್ಸ್​ ಸ್ವೀಕರಿಸಲು ಸಿದ್ಧ ಎಂದು ಇಡಿಗೆ ಬರೆದ ಉತ್ತರದಲ್ಲಿ ಅವರು ಸವಾಲು ಎಸೆದಿದ್ದರು.

ಈ ಪ್ರಕರಣದಲ್ಲಿಯೇ ಸಿಬಿಐ ಕೇಜ್ರಿವಾಲ್ ಅವರನ್ನು ಕಳೆದ ಏಪ್ರಿಲ್‌ನಲ್ಲಿ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಇಡಿ ಸಮನ್ಸ್​ ಜಾರಿ ಮಾಡಿ ನವೆಂಬರ್ 2 ರಂದು ಮೊದಲ ಬಾರಿಗೆ ವಿಚಾರಣೆಗೆ ಕರೆದಿತ್ತು. ಆದರೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದರು. ಇದಾದ ಬಳಿಕ ಮತ್ತೆರಡು ಬಾರಿ ಸಮನ್ಸ್​ ನೀಡಿದ್ದರೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು.

ಏನಿದು ಪ್ರಕರಣ?:ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿತ್ತು ಮತ್ತು ಅದಕ್ಕಾಗಿ ಲಂಚವನ್ನು ನೀಡಿದ ಕೆಲವು ಡೀಲರ್‌ಗಳಿಗೆ ಒಲವು ತೋರಿತ್ತು ಎಂದು ಆರೋಪಿಸಲಾಗಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಇದನ್ನು ಪದೇ ಪದೆ ನಿರಾಕರಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಕರಣ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಶಿಫಾರಸು ಮಾಡಿದರು. ಕಳೆದ ವರ್ಷ ಆಗಸ್ಟ್ 17 ರಂದು ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಇದನ್ನೂ ಓದಿ:ದೆಹಲಿ ಅಬಕಾರಿ ಹಗರಣ: ಮೂರನೇ ಸಲ ಇಡಿ ವಿಚಾರಣೆಗೆ ಸಿಎಂ ಅರವಿಂದ್​​ ಕೇಜ್ರಿವಾಲ್​ ಗೈರು

ABOUT THE AUTHOR

...view details