ನವದೆಹಲಿ: ಕಲ್ಲಿದ್ದಲು ಹಗರಣ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ನ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಪತ್ನಿ ರುಜಿರಾ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ)ವು ಗುರುವಾರ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆಯೂ ಇಡಿ ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿಯನ್ನು ವಿಚಾರಣೆಗೊಳಪಡಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಾಣಿಗಾರಿಕೆ ಮಾಡಿ, ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪದ ಬಗ್ಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೇ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತಂತೆ ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸುತ್ತಿದ್ದು, ಇದರಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಪತ್ನಿ ರುಜಿರಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದೆ 2021ರ ಸೆಪ್ಟೆಂಬರ್ 6ರಂದು ಅಭಿಷೇಕ್ ಬ್ಯಾನರ್ಜಿಯನ್ನು ಇಡಿ ಅಧಿಕಾರಿಗಳು 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದೀಗ ಮತ್ತೆ ಮಾ.21, 22ರಂದು ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್ ಬ್ಯಾನರ್ಜಿ ಜತೆಗೆ ಅವರ ಪತ್ನಿಗೂ ಸಮನ್ಸ್ ಜಾರಿಗೊಳಿಸಲಾಗಿದೆ.
ಇನ್ನು, ಇಡಿ ಸಮನ್ಸ್ ವಿರುದ್ಧ ಅಭಿಷೇಕ್ ಈ ಮೊದಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾವು ಪಶ್ಚಿಮ ಬಂಗಾಳದ ನಿವಾಸಿವಾಗಿದ್ದು, ದೆಹಲಿಯಲ್ಲಿ ವಿಚಾರಣೆಗೆ ಒಳಗಾಗುವುದರಿಂದ ವಿನಾಯಿತಿ ನೀಡಬೇಕೆಂದು ಕೋರಿದ್ದರು. ಆದರೆ, ಇದೇ ಮಾರ್ಚ್ 11ರಂದು ಅಭಿಷೇಕ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಯಾವುದೇ ಪ್ರದೇಶದ ಗಡಿಯನ್ನು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಇದೀಗ ಒಂದೇ ವಾರದಲ್ಲಿ ಮತ್ತೆ ಪತಿ ಮತ್ತು ಪತ್ನಿ ಇಬ್ಬರಿಗೂ ಸಮನ್ಸ್ ಜಾರಿಯಾಗಿದೆ.
ಇದನ್ನೂ ಓದಿ:ನಟ ದಿಲೀಪ್ ಮೇಲಿನ ಕೊಲೆ ಸಂಚು ಪ್ರಕರಣದ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನಕಾರ