ನವದೆಹಲಿ:ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೂ ಮುನ್ನವೇ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವ್ ಆ್ಯಪ್ ಪ್ರಚಾರಕರಿಂದ 3.12 ಕೋಟಿ ರೂಪಾಯಿ ನಗದನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ವಶಕ್ಕೆ ಪಡಿಸಿಕೊಂಡಿದೆ. ಇಡಿ ಮಾಹಿತಿ ಪ್ರಕಾರ, ಬೆಟ್ಟಿಂಗ್ ಆ್ಯಪ್ ಪ್ರಚಾರಕರು ಛತ್ತೀಸ್‌ಗಢದಲ್ಲಿ ಬಾರಿ ಪ್ರಮಾಣದಲ್ಲಿ ಹಣ ಸಾಗಿಸುತ್ತಿದ್ದರು. ರಾಜಕೀಯ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ಈ ಹಣ ತಲುಪಿಸಲಾಗುತ್ತಿತ್ತು. ಯುಎಇಯಿಂದ ಕಳುಹಿಸಲಾದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯಲ್ಲಿ ಕೆಲವು ದೊಡ್ಡ ರಾಜಕೀಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಹೆಸರು ಬೆಳಕಿಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಹೊಸ ಬಳಕೆದಾರರನ್ನು ನೋಂದಾಯಿಸಲು, ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಸಕ್ರಿಯಗೊಳಿಸಲು, ಬಳಕೆದಾರರ ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಲೇಯರ್ಡ್ ವೆಬ್ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಬೆಟ್ಟಿಂಗ್ ಅಪ್ಲಿಕೇಶನ್ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ, ಭೋಪಾಲ್ ಮತ್ತು ಮುಂಬೈನಲ್ಲಿ ಶೋಧ ನಡೆಸಿ 417 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೆಪ್ಟೆಂಬರ್ 15ರಂದು ಇಡಿ ಮಾಹಿತಿ ನೀಡಿತ್ತು.
ಕೋಲ್ಕತ್ತಾ, ಭೋಪಾಲ್, ಮುಂಬೈ ಇತ್ಯಾದಿ ಪ್ರದೇಶಗಳಲ್ಲಿ ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಮೂಲಕ ಮಾಡಿದ ಅಕ್ರಮ ಹಣ ವರ್ಗಾವಣೆ ಜಾಲಗಳ ವಿರುದ್ಧ ಇತ್ತೀಚೆಗೆ ವ್ಯಾಪಕ ಶೋಧಗಳನ್ನು ನಡೆಸಲಾಗಿತ್ತು. ಅಪಾರ ಪ್ರಮಾಣದ ಹಣ, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿತ್ತು.