ಗರಿಯಾಬಂದ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಕಲ್ಲಿದ್ದಲು ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಿಯಾಬಂದ್‌ನಲ್ಲಿರುವ ರಾಯ್‌ಗಢ ಜಿಲ್ಲಾಧಿಕಾರಿ ರಾನು ಸಾಹು ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದಾಳಿ ನಡೆಸಿದೆ.
ಛತ್ತೀಸ್‌ಗಢದಲ್ಲಿ ನಡೆದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಅಕ್ಟೋಬರ್ 11ರಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ದೊಡ್ಡ-ದೊಡ್ಡ ಕಲ್ಲಿದ್ದಲು ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ಆರಂಭಿಸಿದ ನಂತರ ಹಲವಾರು ಅಧಿಕಾರಿಗಳು ಸಹ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ಬಯಲಾಗಿದೆ.
ಮೂವರು ಐಎಎಸ್ ಅಧಿಕಾರಿಗಳು, ಮಾಜಿ ಶಾಸಕರು ಸೇರಿ ಅನೇಕರ ವಿರುದ್ಧ ಆರೋಪ ಕೇಳಿಬಂದಿದ್ದು, ಇದುವರೆಗೆ 4 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಎಸ್ ಅಧಿಕಾರಿಗಳ ವಿರುದ್ಧ ಕಮಿಷನ್ ಹಾಗೂ ಲಂಚ ಪಡೆದ ಆರೋಪ ಇದ್ದು, ಈಗಾಗಲೇ ಓರ್ವ ಐಎಎಸ್ ಅಧಿಕಾರಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದೀಗ ರಾಯ್‌ಗಢ ಜಿಲ್ಲಾಧಿಕಾರಿ ರಾನು ಸಾಹು ಅವರ ಮನೆ ಮೇಲೆ 12 ಜನ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಮತ್ತೊಂದೆಡೆ ಅಧಿಕಾರಿಯ ಸಂಬಂಧಿಕರ ಮನೆ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಐಎಎಸ್ ಅಧಿಕಾರಿ ಬಂಧನ, ಜಿಲ್ಲಾಧಿಕಾರಿ ಮನೆಗೆ ಇಡಿ ಸೀಲ್