ಹೈದರಾಬಾದ್ (ತೆಲಂಗಾಣ):ಗ್ರಾನೈಟ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತೆಲಂಗಾಣ ಸಚಿವ ಮತ್ತು ಟಿಆರ್‌ಎಸ್ ನಾಯಕ ಗಂಗುಲಾ ಕಮಲಾಕರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದಾಳಿ ಮಾಡಿದೆ.
ಕೆಲವು ಗ್ರಾನೈಟ್ ಕಂಪನಿಗಳು ಅಕ್ರಮ ಎಸಗಿವೆ ಎಂಬ ಎರಡು ದೂರುಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಕರೀಂನಗರದ 9 ಗ್ರಾನೈಟ್ ಕಂಪನಿಗಳು ಅಕ್ರಮ ಎಸಗಿವೆ ಎಂದು ಕಳೆದ ವರ್ಷ ಸಿಬಿಐ, ಎನ್‌ಜಿಟಿ, ಕೇಂದ್ರ ಪರಿಸರ ಇಲಾಖೆಯಂತಹ ಕೇಂದ್ರ ತನಿಖಾ ಸಂಸ್ಥೆಗಳಿಗೆ ಪರಾಳ ಶೇಖರ್ ರಾವ್ ಎಂಬುವವರು ದೂರು ನೀಡಿದ್ದರು.
ಈ ಕುರಿತ ವಿವರಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ. 2019ರಲ್ಲಿ ಬಿಜೆಪಿ ಸಂಸದ ಬಂಡಿ ಸಂಜಯ್ ಕೂಡ ಇದೇ ವಿಚಾರವಾಗಿ ಕೇಂದ್ರಕ್ಕೆ ದೂರು ನೀಡಿದ್ದರು. ಈ ಎರಡು ದೂರುಗಳ ಆಧಾರದ ಮೇಲೆ ತನಿಖಾ ಸಂಸ್ಥೆಗಳು ಶೋಧ ನಡೆಸುತ್ತಿವೆ.
ಇಡಿ ಮತ್ತು ಐಟಿ ಜಂಟಿ ದಾಳಿ:ಇಂದು ಇಡಿ ಮತ್ತು ಐಟಿ ಇಲಾಖೆಯ ಅಧಿಕಾರಿಗಳು 20 ತಂಡಗಳಾಗಿ ವಿಂಗಡಿಸಿ ಹೈದರಾಬಾದ್ ಮತ್ತು ಕರೀಂನಗರದ ಗ್ರಾನೈಟ್ ಕಂಪನಿಗಳ ಮಾಲೀಕರ ಮನೆ ಮತ್ತು ಕಚೇರಿಗಳಲ್ಲಿ ದಾಳಿ ಮಾಡಿ ತಪಾಸಣೆ ನಡೆಸಿದರು. ಹೈದರಾಬಾದ್‌ನ ಸೋಮಾಜಿಗುಡಾದಲ್ಲಿರುವ ಪಿಎಸ್‌ಆರ್ ಗ್ರಾನೈಟ್ಸ್ ಕಚೇರಿಗಳು ಮತ್ತು ಹೈದರ್‌ಗುಡಾದ ಉಪ್ಪಾರಪಲ್ಲಿಯಲ್ಲಿರುವ ಎಸ್‌ವಿಜಿ ಗ್ರಾನೈಟ್ಸ್ ಮುಖ್ಯಸ್ಥರ ಮನೆ ಮತ್ತು ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ.
ಈ ವೇಳೆ ಕಂಪನಿಯ ಮುಖ್ಯಸ್ಥ ಶ್ರೀಧರ್ ರಾವ್ ಕರೀಂನಗರದ ಮೂರು ಗ್ರಾನೈಟ್ ಕ್ವಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಗೋದಾಮಿನಲ್ಲಿ ಸಂಗ್ರಹವಾಗಿರುವ ಗ್ರಾನೈಟ್ ಅನ್ನು ಕ್ವಾರಿಗಳಿಂದ ಬಂದರುಗಳಿಗೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಧಿಕಾರಿಗಳು ಬಯಲು ಮಾಡಿದ್ದಾರೆ.
ಹಿಮಾಯತ್ ನಗರದ ಶ್ವೇತಾ ಗ್ರಾನೈಟ್ಸ್ ಸೇರಿದಂತೆ ಬಂಜಾರಾ ಹಿಲ್ಸ್‌ನಲ್ಲಿರುವ ಗ್ರಾನೈಟ್ ಕಚೇರಿ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆಯಿಂದಲೇ ಅಧಿಕಾರಿಗಳು ವಿಶೇಷ ತಂಡಗಳಾಗಿ ವಿಂಗಡಿಸಿ ದಾಳಿ ನಡೆಸಿ, ಗ್ರಾನೈಟ್ ಕಂಪನಿಗಳು ಹವಾಲಾ, ಅಕ್ರಮ ಹಣ ವರ್ಗಾವಣೆ, ಅಕ್ರಮ ಗಣಿಗಾರಿಕೆ ಮೂಲಕ ನಿಯಮಗಳಿಗೆ ವಿರುದ್ಧವಾಗಿ ರಫ್ತು ಮಾಡಿರುವ ಮಾಹಿತಿ ಆಧರಿಸಿ ಅಧಿಕಾರಿಗಳು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.