ಹೈದರಾಬಾದ್ (ತೆಲಂಗಾಣ): ಅಕ್ರಮ ಹಣ ವರ್ಗಾವಣೆ ತಡೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣಕ್ಕೆ ಎಂಬಿಎಸ್ ಗ್ರೂಪ್ ಆಫ್ ಕಂಪನಿಗಳು ಮತ್ತು ಮುಸದ್ದಿಲಾಲ್ ಜ್ಯುವೆಲರ್ಸ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಹೈದರಾಬಾದ್ ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ 20 ಕಡೆಯಲ್ಲಿ ಇಡಿ ದಾಳಿ ಮಾಡಿ, ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ವಶಪಡಿಸಿಕೊಂಡಿದೆ.
ಎಂಬಿಎಸ್ ಗ್ರೂಪ್ ಮತ್ತು ಅದರ ನಿರ್ದೇಶಕ ಸುಕೇಶ್ ಗುಪ್ತಾ ಮತ್ತು ಸಹೋದರ ಕಂಪನಿಗಳು ಹೆಚ್ಚುವರಿ ಶೇ.5ರಷ್ಟು ತೆರಿಗೆಯನ್ನು ಪಾವತಿಸದೆ ವಿದೇಶಿ ವಿನಿಮಯಕ್ಕೆ ನಿರ್ವಹಿಸಲು ಎಂಎಂಟಿಸಿ (ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ) ನಿಗಮದಿಂದ ಸಾಲದ ಮೇಲೆ ಚಿನ್ನವನ್ನು ಪಡೆದಿವೆ. ಇದರಿಂದ ಎಂಎಂಟಿಸಿ ನಿಗಮಕ್ಕೆ ನಷ್ಟ ಉಂಟಾಗಿದ್ದು, 2014ರಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಜಯಲಲಿತಾ ಸಾವು ಪ್ರಕರಣ: ಶಶಿಕಲಾ, ಮಾಜಿ ಆರೋಗ್ಯ ಸಚಿವ, ಕಾರ್ಯದರ್ಶಿ ವಿರುದ್ಧ ಸರ್ಕಾರಕ್ಕೆ ವರದಿ
ಹೈದರಾಬಾದ್ ಸೇರಿದಂತೆ 20 ಕಡೆ ನಡೆಸಿದ ಇಂದಿನ ದಾಳಿಯಲ್ಲಿ ಇಡಿ ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖವಾಗಿ ಮೂರು ಶೋರೂಂಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ, ವಜ್ರ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 50 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಇರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.