ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ವಿದೇಶಗಳಿಗೆ ಸುಮಾರು 200 ಕೋಟಿ ರೂ ಮೌಲ್ಯದ ಔಷಧ ಕಳ್ಳಸಾಗಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಅಲ್ಲದೇ, ಕೆಲವರಿಗೆ ಸಮನ್ಸ್ ಕೂಡ ಜಾರಿ ಮಾಡಲಾಗಿದೆ.
ಪ್ರಮುಖ ಔಷಧಿ ದಂಧೆಕೋರನಾಗಿ ಗುರುತಿಸಿಕೊಂಡಿರುವ ಕೈಲಾಸ್ ರಾಜಪುತ್ ಸಹಚರ ಅಲಿ ಅಸಗರ್ ಶಿರಾಝಿ ಮುಂಬೈನಿಂದ ಯುರೋಪ್ ಹಾಗೂ ಆಸ್ಟ್ರೇಲಿಯಾಗೆ ಅಪಾರ ಪ್ರಮಾಣದ ಔಷಧವನ್ನು ಅಕ್ರಮವಾಗಿ ರವಾನಿಸಿರುವ ಆರೋಪ ಎದುರಿಸಿದ್ದಾನೆ. ಕಳೆದ ಮೇ ತಿಂಗಳಲ್ಲಿ ಈತನನ್ನು ಮುಂಬೈ ಪೊಲೀಸ್ ಇಲಾಖೆಯ ಸುಲಿಗೆ ನಿಗ್ರಹ ವಿಭಾಗದ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇಡಿ ಅಧಿಕಾರಿಗಳು ಮುಂಬೈನ ಏಳು ಪ್ರದೇಶಗಳಲ್ಲಿ ದಾಳಿ ಮಾಡಿ ಶೋಧ ಕೈಗೊಂಡಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ: ಲಾವಾ ಮೊಬೈಲ್ ಕಂಪನಿಯ ಎಂಡಿ ಸೇರಿ ನಾಲ್ವರ ಬಂಧಿಸಿದ ಇಡಿ
ಪ್ರಕರಣವೇನು?: ಮಾರ್ಚ್‌ನಲ್ಲಿ ಮುಂಬೈ ಪೊಲೀಸರು ಕೆಟಮೈನ್ ಮತ್ತು ವಯಾಗ್ರ ಔಷಧಿ ಕಳ್ಳಸಾಗಣೆ ಜಾಲ ಭೇದಿಸಿದ್ದರು. ಪೂರ್ವ ಅಂಧೇರಿ ಪ್ರದೇಶದಲ್ಲಿ ಕೊರಿಯರ್ ಕಚೇರಿಯೊಂದರ ಮೇಲೆ ದಾಳಿ ಮಾಡಿದ್ದ ಪೊಲೀಸರು, ಎಂಟು ಕೋಟಿ ರೂ. ಮೌಲ್ಯದ 15 ಕೆಜಿ ಕೆಟಮೈನ್ ಹಾಗೂ 23 ಸಾವಿರ ವಯಾಗ್ರ ಮಾತ್ರೆಗಳನ್ನು ಜಪ್ತಿ ಮಾಡಿದ್ದರು. ಈ ಔಷಧವನ್ನು ಕೊರಿಯರ್ ಸೇವೆಗಳ ಮೂಲಕ ಅಕ್ರಮವಾಗಿ ಆಸ್ಟ್ರೇಲಿಯಾ, ಬ್ರಿಟನ್ಗೆ ರವಾನಿಸಲು ಯೋಜಿಸಲಾಗಿತ್ತು.
ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರತ್ಯೇಕ ತನಿಖೆ ಕೈಗೊಂಡಿದೆ. ಔಷಧ ಕಳ್ಳಸಾಗಣಿಕೆಯಲ್ಲಿ ಅಲಿ ಅಸಗರ್ ನೇರ ನಂಟು ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈತ ಆಸ್ಟ್ರೇಲಿಯಾ ಸೇರಿ ಇತರ ದೇಶಗಳಿಗೆ ಅಕ್ರಮವಾಗಿ 200 ಕೋಟಿ ರೂ. ಮೌಲ್ಯದ ಔಷಧಿ ಸಾಗಣೆ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಅಸಗರ್ ಹಾಗೂ ಈತನಿಗೆ ಸಂಬಂಧಪಟ್ಟ ಪ್ರದೇಶಗಳಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ತಲೆಮರೆಸಿಕೊಂಡಿರುವ ಇಬ್ಬರು:ಮತ್ತೊಂದೆಡೆ,ಔಷಧ ಕಳ್ಳಸಾಗಣೆ ದಂಧೆಯಲ್ಲಿ ಅಲಿ ಅಸಗರ್ ಮಾತ್ರವಲ್ಲದೇ ಕೈಲಾಸ್ ರಾಜಪುತ್ ಹಾಗೂ ದಾನೀಶ್ ಮುಲ್ಲಾ ಕೂಡ ತೊಡಗಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಕೈಲಾಸ್ ರಾಜಪುತ್ ಸಹವರ್ತಿಯಾಗಿರುವ ಅಲಿ ಅಸಗರ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಕೂಡ ಆಗಿದ್ದಾನೆ ಎನ್ನಲಾಗಿದೆ. ಕೈಲಾಸ್ ಹಾಗೂ ಮುಲ್ಲಾ ಪತ್ತೆಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಎನ್‌ಸಿಪಿ ಮಾಜಿ ಸಂಸದರಿಗೆ ಸೇರಿದ 315 ಕೋಟಿ ರೂ. ಮೌಲ್ಯದ 70 ಆಸ್ತಿಗಳ ಜಪ್ತಿ ಮಾಡಿದ ಇಡಿ!