ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಅವರ ನಿವಾಸದಲ್ಲಿ ದಾಖಲೆಯ 2.82 ಕೋಟಿ ರೂಪಾಯಿ ನಗದು, 1.8 ಕೆಜಿ ಚಿನ್ನ ಹಾಗೂ 133 ಚಿನ್ನದ ನಾಣ್ಯ ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಾರ ಪ್ರಮಾಣದ ಚಿನ್ನಾಭರಣ, ನಾಣ್ಯ ವಶ ಕೋಲ್ಕತ್ತಾ ಮೂಲದ ಕಂಪನಿಯ ಹವಾಲಾ ವಹಿವಾಟಿನ ಜೊತೆ ಸಂಬಂಧ ಇರುವ ಹಿನ್ನೆಲೆಯಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸದ ಮೇಲೆ ಕಳೆದ ಸೋಮವಾರ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇಷ್ಟೊಂದು ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈಗಾಗಲೇ ಸತ್ಯೇಂದ್ರ ಜೈನ್ ಅವರು ಬಂಧನಕ್ಕೊಳಗಾಗಿದ್ದು, ಜೂನ್ 9ರವರೆಗೆ ಇಡಿ ಕಸ್ಟಡಿಯಲ್ಲಿರಲಿದ್ದಾರೆ.
ಇದನ್ನೂ ಓದಿ:ಆಪ್ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ
ಸತ್ಯೇಂದ್ರ ಜೈನ್ ಅವರು ಷೇರುದಾರರಾಗಿರುವ ನಾಲ್ಕು ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಲು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಎಎಪಿ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.ಅದಲ್ಲದೇ, ಅವರು ದೆಹಲಿಯಲ್ಲಿ ಹಲವಾರು ಶೆಲ್ ಕಂಪನಿಗಳನ್ನು ಖರೀದಿಸಿದ್ದಾರೆ ಹಾಗೂ ಕೋಲ್ಕತ್ತಾದ ಮೂವರು ಹವಾಲಾ ಆಪರೇಟರ್‌ಗಳ 54 ಶೆಲ್ ಕಂಪನಿಗಳ ಮೂಲಕ 16.39 ಕೋಟಿ ರೂಪಾಯಿ ಮೌಲ್ಯದ ಕಪ್ಪು ಹಣ ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು.
ಜೈನ್ ಪ್ರಯಾಸ್, ಇಂಡೋ ಮತ್ತು ಅಕಿಂಚನ್ ಹೆಸರಿನ ಕಂಪನಿಗಳಲ್ಲಿ ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಜೈನ್ ಹೊಂದಿದ್ದರು. ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾದ ನಂತರ, ಅವರ ಎಲ್ಲ ಷೇರುಗಳನ್ನು 2015ರಲ್ಲಿ ಅವರ ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕಂಪನಿಗಳು ತಮ್ಮ ಕೋಲ್ಕತ್ತಾ ಕೌಂಟರ್ಪಾರ್ಟ್ಗೆ ನಗದು ಪಾವತಿಗಳನ್ನು ವರ್ಗಾಯಿಸುತ್ತಿದ್ದವು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಮನಿ ಲಾಂಡ್‌ರಿಂಗ್ ತಡೆ ಕಾಯ್ದೆಯಡಿ ಏಪ್ರಿಲ್ನಲ್ಲಿ ಜೈನ್, ಅವರ ಪತ್ನಿ ಪೂನಂ ಜೈನ್ ಮತ್ತು ಇತರರ ಮೇಲೆ ಕೇಸು ದಾಖಲಾಗಿತ್ತು.