ನವದೆಹಲಿ:ದೆಹಲಿಯ ಅಬಕಾರಿ ನೀತಿ ಸಂಬಂಧಿತ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗು ಬಿಆರ್‌ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ 10 ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿದೆ. ಅಲ್ಲದೇ, ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ನಿನ್ನೆ(ಸೋಮವಾರ) ದಿಲ್ಲಿಯಲ್ಲಿನ ಇಡಿ ಕಚೇರಿಗೆ ಬೆಳಗ್ಗೆ 10:30ಕ್ಕೆ ಆಗಮಿಸಿದ್ದ ಕವಿತಾ ಅವರಿಂದ ಅಧಿಕಾರಿಗಳು 11 ಗಂಟೆಯಿಂದಲೇ ಹೇಳಿಕೆ ದಾಖಲಿಸಿಕೊಳ್ಳಲು ಶುರು ಮಾಡಿದ್ದರು. ಪ್ರಕರಣದಲ್ಲಿ ಕವಿತಾ ಆರೋಪಿಯಾಗಿರುವ ಕಾರಣ ಅವರ ಪ್ರತಿಯೊಂದು ಹೇಳಿಕೆಯನ್ನೂ ಅಧಿಕಾರಿಗಳು ಅಚ್ಚುಕಟ್ಟಾಗಿ ದಾಖಲಿಸಿಕೊಂಡಿದ್ದಾರೆ. 10 ಗಂಟೆಗೂ ಅಧಿಕ ಕಾಲ ಪ್ರಶ್ನಿಸಿದ ಇಡಿ ರಾತ್ರಿ 9:15 ರ ಬಳಿಕ ಬಿಟ್ಟಿತು.
ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಎಂಎಲ್ಸಿ ಕವಿತಾ ಅವರು ವಿಚಾರಣೆಯ ಬಳಿಕ ಇಡಿ ಕಚೇರಿಯಿಂದ ಹೊರಬರುತ್ತಿದ್ದಾಗ ವಿಜಯದ ಸಂಕೇತವನ್ನು ಪತ್ರಕರ್ತರತ್ತ ತೋರಿಸುತ್ತಾ ನಗುಮುಖದಿಂದಲೇ ಕಾರಿನ ಕಡೆಗೆ ಹೆಜ್ಜೆ ಹಾಕಿದರು. ಇದಕ್ಕೂ ಮೊದಲು ಮಾರ್ಚ್ 11 ರಂದು ಸುಮಾರು 9 ಗಂಟೆಗಳ ಕಾಲ ಇವರನ್ನು ಇಡಿ ಮೊದಲ ಬಾರಿಗೆ ಪ್ರಶ್ನಿಸಿತ್ತು. ನಂತರ ಮಾರ್ಚ್ 16 ರಂದು 2ನೇ ಬಾರಿಗೆ ವಿಚಾರಣೆ ನಡೆಸಲಾಗಿತ್ತು.
ಕವಿತಾ ವಿರುದ್ಧದ ಆರೋಪವೇನು?:ಮದ್ಯ ನೀತಿ ಹಗರಣದಲ್ಲಿ ಕವಿತಾ ಅನೇಕ ಮೊಬೈಲ್ ಫೋನ್ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿಯನ್ನೂ ಹೊಂದಿದ್ದಾರೆ ಎಂಬುದು ಇಡಿ ಅಧಿಕಾರಿಗಳ ಆರೋಪ. ಇದೇ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ, ಕವಿತಾ ಅವರ ಆಪ್ತ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಹಗರಣದಲ್ಲಿ ನಡೆದ ವಹಿವಾಟುಗಳ ಬಗ್ಗೆ ಕವಿತಾರನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.