ಕೊಲ್ಹಾಪುರ(ಮಹಾರಾಷ್ಟ್ರ):ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಜಿ ಸಚಿವ ಹಸನ್ ಮುಶ್ರಿಫ್ಗೆ ಇಂದು ಬೆಳ್ಳಂಬೆಳಗ್ಗೆ ಐಟಿ ಮತ್ತು ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಅವರ ನಿವಾಸ ಸೇರಿದಂತೆ ಹಲವು ಜಾಗಗಳ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಗಿಭದ್ರತೆಯ ನಡುವೆ ಜಂಟಿ ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಚಿವರ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿದ ಬೆನ್ನಲ್ಲೇ ಇಡಿ ದಾಳಿ ನಡೆಸಿದೆ. ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಸೇರಿ ನಡೆಸಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ಸಕ್ಕರೆ ಇಲಾಖೆ ಸಚಿವರಾಗಿದ್ದ ಹಸನ್ ಮುಶ್ರಿಫ್ 158 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆಸಿದ್ದಾರೆ. ಇದರಿಂದಾಗಿ ಮಾಜಿ ಸಚಿವ ಅಪಾರವಾದ ಆಸ್ತಿಯನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಕ್ಕರೆ ಕಾರ್ಖಾನೆಗಳಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದ ಪ್ರಕರಣ ದಾಖಲಿಸಿಕೊಂಡ ಇಡಿ, ಐಟಿ ಇಂದು ದಾಳಿ ನಡೆಸಿವೆ. ಸುಮಾರು ಎರಡು ಡಜನ್ಗೂ ಅಧಿಕ ಅಧಿಕಾರಿಗಳು ಏಕಕಾಲಕ್ಕೆ ಕಾಗಲ್ ಪಟ್ಟಣ ಮತ್ತು ಇತರ ಸ್ಥಳಗಳಲ್ಲಿರುವ ಮುಶ್ರಿಫ್ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಅವರು ಕೆಲವು ಮಹತ್ವದ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.