ಕೋಲ್ಕತ್ತಾ(ಪಶ್ಚಿಮ ಬಂಗಾಳ):ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ನ(ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ಸಿಎಂ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಶುಕ್ರವಾರ ಬೆಳಿಗ್ಗೆ ಕೋಲ್ಕತ್ತಾದಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಆಗಸ್ಟ್ 29ರಂದು ಮೇಯೊ ರಸ್ತೆಯಲ್ಲಿ ಟಿಎಂಸಿ ಸಂಸ್ಥಾಪನಾ ದಿನಾಚರಣೆ ವೇದಿಕೆಯಲ್ಲಿ ಮಾತನಾಡಿದ್ದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ಸೇಡಿನ ರಾಜಕಾರಣ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದಾದ ಮರುದಿನವೇ ಅವರಿಗೆ ಸಮನ್ಸ್ ಬಂದಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಮಾತನಾಡಿದ್ದ ಮಮತಾ ಬ್ಯಾನರ್ಜಿ ಕೂಡ ಬಿಜೆಪಿ ಟೀಕಾಪ್ರಹಾರ ನಡೆಸಿದ್ದರು. ಮುಂದಿನ ದಿನಗಳಲ್ಲಿ ಸೋದರಳಿಯ ಅಭಿಷೇಕ್ ಹಾಗೂ ಇತರೆ ಹಿರಿಯ ಮುಖಂಡರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಶಂಕಿಸಿದ್ದರು. ಇದೀಗ ಈ ಬೆಳವಣಿಗೆ ನಡೆದಿದೆ. ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಜುಲೈ 23ರಂದು ಇಡಿ ಬಂಧಿಸಿದೆ. ನಂತರ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.