ನವದೆಹಲಿ: ದೆಹಲಿ ಅಬಕಾರಿ ನೀತಿ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಎರಡನೇ ಬಾರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 21 ರಂದು ಹಾಜರಾಗುವಂತೆ ಅರವಿಂದ್ ಕೇಜ್ರಿವಾಲ್ ಸೂಚಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ನವೆಂಬರ್ 2 ರಂದು ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಅಂದು ತನಗೆ ನೀಡಿದ ನೋಟಿಸ್ ''ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ'' ಎಂದು ಆರೋಪಿಸಿ, ನೀಡಿದ ನೋಟಿಸ್ ಹಿಂಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದರು.
ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಅರವಿಂದ್ ಕೇಜ್ರಿವಾಲ್ ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದರು. ಹೀಗಾಗಿ "ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಪ್ರಚಾರ ಮಾಡುವುದನ್ನು ತಡೆಯುವ ಗುರಿ ಸಮನ್ಸ್ನ ಹಿಂದಿದೆ'' ಎಂದು ಮುಖ್ಯಮಂತ್ರಿ ಕಚೇರಿ ಆಪಾದಿಸಿತ್ತು. ಅಲ್ಲದೇ ''ಬಿಜೆಪಿಯ ಒತ್ತಾಯದ ಮೇರೆಗೆ ತಮಗೆ ನೋಟಿಸ್ ಕಳುಹಿಸಲಾಗಿದೆ'' ಎಂದೂ ಕೇಜ್ರಿವಾಲ್ ದೂರಿದ್ದರು. ಈ ವೇಳೆ ಆಮ್ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್ ನವೆಂಬರ್ 2 ರಂದು ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಲಿದ್ದರು. ಸಿಂಗ್ರೌಲಿಯಲ್ಲಿ ಸಿಎಂ ಭಗವಂತ್ ಮಾನ್ ಜೊತೆಗೆ ರೋಡ್ ಶೋ ನಡೆಸಲಿದ್ದರು.