ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತತವಾಗಿ ಮೂರು ದಿನಗಳಿಂದ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದು ಯಾವುದೇ ವಿಚಾರಣೆ ಇರುವುದಿಲ್ಲ. ಆದರೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿದೆ. ಹೀಗಾಗಿ ರಾಹುಲ್ ಶುಕ್ರವಾರ ವಿಚಾರಣೆಗೆ ಮತ್ತೆ ಹಾಜರಾಗುವ ಸಾಧ್ಯತೆ ಇದೆ.
ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ(ಇಡಿ) ಕೇಂದ್ರ ಕಚೇರಿಗೆ ಬೆಳಗ್ಗೆ ಹಾಜರಾದ 51 ವರ್ಷದ ರಾಹುಲ್ ಗಾಂಧಿ ಅವರು ಸುಮಾರು 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ರಾತ್ರಿ 9:30ರ ಸುಮಾರಿಗೆ ಕಚೇರಿಯಿಂದ ನಿರ್ಗಮಿಸಿದರು.
ರಾಹುಲ್ ಗಾಂಧಿ ಕಳೆದ ಮೂರು ದಿನಗಳಿಂದ ನೀಡಿರುವ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಅನೇಕ ಸೆಷನ್‌ಗಳಲ್ಲಿ ದಾಖಲಿಸಲಾಗಿದೆ. ನಿನ್ನೆ ನಡೆದ ವಿಚಾರಣೆ ಸೇರಿ ರಾಹುಲ್ ಗಾಂಧಿ ಇಡಿ ತನಿಖಾಧಿಕಾರಿಗಳೊಂದಿಗೆ ಸುಮಾರು 30 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಇಂದು ಒಂದು ದಿನದ ವಿನಾಯ್ತಿ ನೀಡಿರುವ ಜಾರಿ ನಿರ್ದೇಶನಾಲಯ ಜೂನ್ 17ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ- ಆಕ್ರೋಶ:ಇನ್ನೊಂದೆಡೆ ದೇಶಾದ್ಯಂತ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸುತ್ತಿದೆ. ಇಡಿ ವಿಚಾರಣೆಗೆ ವಿರೋಧ ವ್ಯಕ್ತಪಡಿಸಿರುವ ಪಕ್ಷದ ಕಾರ್ಯಕರ್ತರು ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿ ಮತ್ತು ಇಡಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಕೈ ಕಾರ್ಯಕರ್ತರು ಇಡಿ ಕ್ರಮವನ್ನು " ರಾಜಕೀಯ ಪ್ರೇರಿತ" ಎಂದು ಆರೋಪಿಸಿದರು.
ದೆಹಲಿಯ 24, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಆವರಣದೊಳಗೆ ಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಬಲವಂತವಾಗಿ ಎಳೆದೊಯ್ಯುವ ದೃಶ್ಯಗಳು ಕಂಡು ಬಂದಿತು. ಮಹಿಳೆಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಲವಂತವಾಗಿ ಹೊತ್ತೊಯ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.