ಕರ್ನಾಟಕ

karnataka

ETV Bharat / bharat

ಏಳು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ಮನೀಶ್ ಸಿಸೋಡಿಯಾ.. ಹೇಳಿಕೆ ವಾಪಸ್ ಪಡೆಯಲು ಪಿಳ್ಳೈ ನಿರ್ಧಾರ! - ಸಿಬಿಐ

ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಒಪ್ಪಿಸಿದೆ. ಇನ್ನೊಂದೆಡೆ, ಇದೇ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿಯಾಗಿರುವ ಅರುಣ್ ರಾಮಚಂದ್ರ ಪಿಳ್ಳೈ, ತಮ್ಮ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ದೆಹಲಿಯ ರೋಸ್ ಅವೆನ್ಯೂದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ed-gets-manish-sisodias-remand-till-march-17-in-excise-policy-case
ಮದ್ಯ ನೀತಿ ಹಗರಣ: ಏಳು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ಮನೀಶ್ ಸಿಸೋಡಿಯಾ

By

Published : Mar 10, 2023, 6:06 PM IST

Updated : Mar 10, 2023, 10:43 PM IST

ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ನೀಡಿ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಆದೇಶಿಸಿದೆ. ಇಡಿ ಅಧಿಕಾರಿಗಳು 10 ದಿನಗಳ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ನ್ಯಾಯಾಲಯವು ಮಾರ್ಚ್ 17ರವರೆಗೆ ಇಡಿ ವಶಕ್ಕೆ ನೀಡಿದೆ.

ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರವು ಜಾರಿಗೆ ತರಲು ಹೊರಟಿದ್ದ ಅಬಕಾರಿ ನೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ನೀತಿಯನ್ನು ಸರ್ಕಾರ ಈಗಾಗಲೇ ರದ್ದು ಮಾಡಿದೆ. ಆದರೆ, ಹಗರಣ ಕುರಿತಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯಗಳ ನಾಶ ಹಾಗೂ ವಿರೂಪಗೊಳಿಸಿದ ಆರೋಪದ ಮೇಲೆ ಮಾರ್ಚ್​ 26ರಂದು ದೆಹಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈಗಾಗಲೇ ಜೈಲಿನಲ್ಲಿರುವ ಸಿಸೋಡಿಯಾ ಅವರನ್ನು ಇಡಿ ಅಧಿಕಾರಿಗಳು ಕೂಡ ಗುರುವಾರ ತಮ್ಮ ವಶಕ್ಕೆ ಪಡೆದಿದ್ದಾರೆ. ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಹೆಚ್ಚಿನ ತನಿಖೆಗಾಗಿ 10 ದಿನಗಳ ತಮ್ಮ ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಕೋರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಮಾರ್ಚ್ 17ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ಇದನ್ನೂ ಓದಿ:ಅಬಕಾರಿ ಹಗರಣ.. ಸಿಬಿಐ ಅಧಿಕಾರಿಗಳಿಂದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅರೆಸ್ಟ್​

ಇಡಿ ಅಧಿಕಾರಿಗಳ ವಾದವೇನು?: ಈ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮನೀಶ್​ ಸಿಸೋಡಿಯಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ, ಸಿಸೋಡಿಯಾ ಬೇರೆ ಹೆಸರಲ್ಲಿನ ಸಿಮ್​ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ. ಇಷ್ಟೇ ಅಲ್ಲ, ಇದುವರೆಗೆ ಸಿಸೋಡಿಯಾ ನೀಡಿರುವ ಉತ್ತರಗಳು, ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿ ಇತರ ಆರೋಪಿಗಳು ನೀಡಿದ ಹೇಳಿಕೆಗಳಿಗೆ ವಿರುದ್ಧವಾಗಿವೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಸಿಸೋಡಿಯಾ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಇಡಿ ಅಧಿಕಾರಿಗಳು ವಾದಿಸಿದ್ದಾರೆ.

ಅಲ್ಲದೇ, ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ವಿಜಯ್ ನಾಯರ್ ಅವರನ್ನು ಮನೀಶ್ ಸಿಸೋಡಿಯಾ ಮತ್ತು ತೆಲಂಗಾಣದ ಟಿಆರ್​ಎಸ್​ ವಿಧಾನ ಪರಿಷತ್​ ಸದಸ್ಯೆ ಕೆ.ಕವಿತಾ ಭೇಟಿಯಾಗಿದ್ದಾರೆ. ಇವರ ನಡುವೆ ರಾಜಕೀಯ ನಂಟಿದೆ ಎಂದು ಮತ್ತೊಬ್ಬ ಆರೋಪಿ ಬುಚ್ಚಿಬಾಬು ಗೋರಂಟ್ಲಾ ಬಹಿರಂಗಪಡಿಸಿದ್ದಾರೆ ಎಂದು ಇಡಿ ನ್ಯಾಯಾಲಯದ ಗಮನವನ್ನು ಸೆಳೆಯಿತು.

ಮತ್ತೊಂದೆಡೆ, ಇಡಿ ವಾದವನ್ನು ವಿರೋಧಿಸಿದ ಮನೀಶ್ ಸಿಸೋಡಿಯಾ ಪರ ವಕೀಲರು, ಅಕ್ರಮ ಹಣ ವರ್ಗಾವಣೆ ಆರೋಪ ಕ್ರೂರ ಕೃತ್ಯವಾಗಿದೆ. ಇದು ನಿರಂತರ ಬಂಧನದಲ್ಲಿಡುವ ದುರುದ್ದೇಶಪೂರಿತ ಕ್ರಮವಾಗಿದೆ. ಈ ನೀತಿಯು ಹಲವು ಹಂತಗಳಲ್ಲಿ ನಿರೂಪಿಸಲಾಗಿದ್ದು, ಲೆಫ್ಟಿನೆಂಟ್​ ಗವರ್ನರ್​ ಅವರ ಬಳಿಗೂ ಹೋಗಿತ್ತು. ಅಲ್ಲದೇ, ನಮ್ಮ ಕಕ್ಷಿದಾರನಿಂದ ಯಾವುದೇ ಹಣವನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ವಕೀಲರು ಪ್ರಶ್ನಿಸಿದರು. ಕೊನೆಗೆ ವಾದ - ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು 10 ದಿನಗಳ ಬದಲಿಗೆ ಏಳು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿತು.

ಹೇಳಿಕೆ ವಾಪಸ್​ ಪಡೆಯುವುದಾಗಿ ಪಿಳ್ಳೈಗೆ ಕೋರ್ಟ್​ಗೆ ಮನವಿ:ಇನ್ನೊಂದೆಡೆ, ಇದೇ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿಯಾಗಿರುವ ಅರುಣ್ ರಾಮಚಂದ್ರ ಪಿಳ್ಳೈ, ತಮ್ಮ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ದೆಹಲಿಯ ರೋಸ್ ಅವೆನ್ಯೂದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರಾಮಚಂದ್ರ ಪಿಳ್ಳೈ ಅವರು ಜಾರಿ ನಿರ್ದೇಶನಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ತಾನು ಎಂಎಲ್‌ಸಿ ಕವಿತಾ ಅವರ ಅನಾಮಧೇಯ ಎಂದು ಹೇಳಿದ್ದಾರೆ. ಆ ಹೇಳಿಕೆಯನ್ನು ಶೀಘ್ರವೇ ವಾಪಸ್ ಪಡೆಯುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ಉಳಿದ ತನಿಖೆಗೆ ಸಹಕರಿಸುವುದಾಗಿ ತಿಳಿಸಿದರು. ರಾಮಚಂದ್ರ ಪಿಳ್ಳೈಸ್ ಅವರ ಅರ್ಜಿಯ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಇಡಿಗೆ ನೋಟಿಸ್ ಜಾರಿ ಮಾಡಿದೆ. ಅವರನ್ನು ಇದೇ ತಿಂಗಳ 13ರವರೆಗೆ ಇಡಿ ಕಸ್ಟಡಿಯಲ್ಲಿ ಇರಿಸಲಾಗಿದೆ.

ಇದನ್ನೂ ಓದಿ:ಕೇಜ್ರಿವಾಲ್ ಸಂಪುಟಕ್ಕೆ ಡಿಸಿಎಂ ಸಿಸೋಡಿಯಾ, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

Last Updated : Mar 10, 2023, 10:43 PM IST

ABOUT THE AUTHOR

...view details