ನವದೆಹಲಿ:ವಿದೇಶಿ ನಿಧಿ ಅಕ್ರಮ ಆರೋಪ ಸಂಬಂಧ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ಪ್ರಕರಣ ದಾಖಲಿಸಿದೆ. ಹಣವನ್ನು ಬೇರೆಡೆ ವಿನಿಯೋಗಿಸಿದ ಮತ್ತು ಫೆಮಾ ಕಾಯ್ದೆ ಉಲ್ಲಂಘನೆ ಕುರಿತು ತನಿಖೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಫೆಬ್ರವರಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿತ್ತು. ಇದರ ಆಧಾರದ ಮೇಲೆ ಇಡಿ ಫೆಮಾ ಕಾಯ್ದೆಯಡಿ ಕೇಸ್ ದಾಖಲಿಸಿದೆ. ಐಟಿ ದಾಳಿ ನಂತರ ಇಡಿ ಈ ಹಿಂದೆ ಬಿಬಿಸಿಗೆ ಸಮನ್ಸ್ ಜಾರಿ ಕೂಡ ಮಾಡಿತ್ತು. ತನಿಖೆಯ ಭಾಗವಾಗಿ ಆಡಳಿತ ಮತ್ತು ಸಂಪಾದಕೀಯ ವಿಭಾಗದ ಅಧಿಕಾರಿಯೊಬ್ಬರನ್ನು ವಿಚಾರಣೆ ನಡೆಸಲಾಗಿತ್ತು.
ಇದನ್ನೂ ಓದಿ:'ಬಿಬಿಸಿ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆ' ಕಿಚ್ಚು ಹಚ್ಚಿದ ಟ್ವಿಟರ್ ಲೇಬಲ್
2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಜನವರಿಯಲ್ಲಿ 'ಇಂಡಿಯಾ: ದಿ ಮೋದಿ ಕ್ವೆಶ್ಶನ್' ಎಂಬ ಸಾಕ್ಷ್ಯಚಿತ್ರ ಬಿಬಿಸಿ ಪ್ರಕಟಿಸಿತ್ತು. ಇದು ಭಾರಿ ವಿವಾದ ಮತ್ತು ಟೀಕೆ - ಟಿಪ್ಪಣಿಗೂ ಒಳಪಟ್ಟಿತ್ತು. ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. ಅಲ್ಲದೇ, ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಹಂಚಿಕೊಳ್ಳುವ ಯೂಟ್ಯೂಬ್ ವಿಡಿಯೊಗಳು ಮತ್ತು ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸರ್ಕಾರ ಆದೇಶಿಸಿತ್ತು. ಬಿಬಿಸಿ ಸಾಕ್ಷ್ಯಚಿತ್ರದ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದ ನಂತರವೂ ಕೆಲವೆಡೆ ಸಾಕ್ಷ್ಯಚಿತ್ರ ಪ್ರಸಾರ ಮಾಡಲಾಗಿತ್ತು.