ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಉದ್ಯಮಿ ಸಮೀರ್ ಮಹೇಂದ್ರು ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ನಿನ್ನೆಯಷ್ಟೇ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು. ಆದರೆ, ಎರಡೂ ತನಿಖಾ ಸಂಸ್ಥೆಗಳ ದೋಷಾರೋಪ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರಿನ ಉಲ್ಲೇಖವಿಲ್ಲ.
ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿ ಸಾಕಷ್ಟು ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೂ ಒಳಪಡಿಸಿದ್ದವು. ಅಲ್ಲದೇ, ಬಿಜೆಪಿ ನೇರವಾಗಿ ದೆಹಲಿ ಸರ್ಕಾರ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.
ಮೂರು ಸಾವಿರ ಪುಟಗಳ ಇಡಿ ಚಾರ್ಜ್ ಶೀಟ್:ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಶುಕ್ರವಾರ ಸಿಬಿಐ 10 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ತನ್ನ ಚಾರ್ಜ್ ಶೀಟ್ನಲ್ಲಿ ಏಳು ಆರೋಪಿಗಳನ್ನು ಹೆಸರಿಸಿತ್ತು. ಈಗಾಗಲೇ ಬಂಧಿತ ಇಬ್ಬರು ಉದ್ಯಮಿಗಳು, ಸುದ್ದಿ ವಾಹಿನಿಯ ಮುಖ್ಯಸ್ಥ, ಹೈದರಾಬಾದ್ ಮೂಲದ ಮದ್ಯ ಉದ್ಯಮಿ, ದೆಹಲಿ ಮೂಲದ ಮದ್ಯ ವಿತರಕ ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳ ಹೆಸರನ್ನು ಸಿಬಿಐ ತನ್ನ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿತ್ತು. ಇದೀಗ ಜಾರಿ ನಿರ್ದೇಶನಾಲಯ ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.
ಚಾರ್ಜ್ ಶೀಟ್ ಸಲ್ಲಿಕೆಗೆ ಇದ್ದ 60 ದಿನಗಳ ಕಾಲಾವಧಿ ಮುಕ್ತಾಯವಾಗಿತ್ತು. ನಿಬಂಧನೆಯ ಪ್ರಕಾರ, ಆರೋಪಿಯನ್ನು ಬಂಧಿಸಿದ 60 ದಿನಗಳಲ್ಲಿ ತನಿಖಾ ಸಂಸ್ಥೆಯು ಚಾರ್ಜ್ ಶೀಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಇಂದು ಉದ್ಯಮಿ ಸಮೀರ್ ಮಹೇಂದ್ರು ವಿರುದ್ಧ ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಜಾರಿ ನಿರ್ದೇಶನಾಲಯವು ಬಂಧಿತ ಇತರ ಆರೋಪಿಗಳ ವಿರುದ್ಧ ಶೀಘ್ರವೇ ಪೂರಕ ಆರೋಪ ಪಟ್ಟಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.