ರಾಯ್‌ಪುರ: ಛತ್ತೀಸ್‌ಗಢದ ಕಲ್ಲಿದ್ದಲು ವ್ಯಾಪಾರಿಗಳು ಮತ್ತು ಐಎಎಸ್ ಅಧಿಕಾರಿಗಳ ಮಧ್ಯೆ ಒಪ್ಪಂದದಿಂದ ಕಲ್ಲಿದ್ದಲು ಸಾಗಣೆಯಲ್ಲಿ 500 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಮಾಡಿದೆ.
ರಾಜ್ಯದ ಖನಿಜ ಸಾಗಣೆಯ ವ್ಯವಸ್ಥೆಯನ್ನು ಆನ್‌ಲೈನ್ ಬದಲಾಗಿ, ಆಫ್ಲೈನ್ ಮೂಲಕ ಸಾಗಿಸಿ ಇದರಲ್ಲಿ ಭಾರಿ ಭ್ರಷ್ಟಾಚಾರ ಮಾಡಲಾಗಿದೆ. ಹೀಗೆ ಕಲ್ಲಿದ್ದಲು ಸಾಗಣೆಯಲ್ಲಿ 500 ಕೋಟಿಗೂ ಅಧಿಕ ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ. ಪ್ರತಿ ಟನ್ ಕಲ್ಲಿದ್ದಲಿಗೆ 25 ರೂಪಾಯಿ ಹಣ ತೆರಿಗೆ ನಷ್ಟ ಮಾಡಲಾಗಿದೆ ಎಂದು ಇಡಿ ಹೇಳಿದೆ.
ಆಫ್ಲೈನ್ನಲ್ಲಿ ಖನಿಜ ಸಾಗಣೆ:ಕಲ್ಲಿದ್ದಲು ಸುಲಿಗೆ ಮಾಡಿರುವುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಖನಿಜ ಇಲಾಖೆಯ ನಿರ್ದೇಶಕರು, ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ 2020 ರಲ್ಲಿ ಕಲ್ಲಿದ್ದಲು ಸಾಗಣೆಗೆ ಆಫ್ಲೈನ್ ಮೂಲಕ ವಹಿವಾಟು ನಡೆಸಲು ಅಧಿಸೂಚನೆ ಹೊರಡಿಸಿತ್ತು.
ಇದರಿಂದ ಗಣಿಗಳಿಂದ ಕಲ್ಲಿದ್ದಲನ್ನು ಸಾಗಿಸಲು ಇ-ಪರ್ಮಿಟ್ ಪಡೆಯಲು ಹಿಂದಿನ ಆನ್‌ಲೈನ್ ಪ್ರಕ್ರಿಯೆಯನ್ನು ಕೈಬಿಟ್ಟು ಎನ್‌ಒಸಿ ಪಡೆಯದೆಯೇ ಖನಿಜವನ್ನು ಸಾಗಣೆ ಮಾಡಲಾಗಿದೆ. ಈ ಬೃಹತ್ ಹಗರಣದಲ್ಲಿ ಬಂದ ಕಪ್ಪು ಹಣವನ್ನು ಬೇನಾಮಿ ಆಸ್ತಿಗಳಲ್ಲಿ ಹೂಡಿಕೆ, ಹಿರಿಯ ಅಧಿಕಾರಿಗಳಿಗೆ ಲಂಚ ನೀಡಲು ಮತ್ತು ರಾಜ್ಯದ ರಾಜಕೀಯ ವ್ಯಕ್ತಿಗಳಿಗೂ ಇದರಲ್ಲಿ ಪಾಲು ಹೋಗಿದೆ ಎಂಬುದನ್ನು ಇಡಿ ಕಂಡುಕೊಂಡಿದೆ.
ಅಕ್ರಮ ಸುಲಿಗೆ ಮತ್ತು ಸಾಕ್ಷ್ಯ ನಾಶಪಡಿಸಿದ ಸಂಚಿನ ವಿರುದ್ಧ ಆದಾಯ ತೆರಿಗೆ ಇಲಾಖೆದ ದಾಖಲಿಸಿದ ಎಫ್‌ಐಆರ್‌ನ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ತನಿಖೆ ಪ್ರಾರಂಭಿಸಿತ್ತು. ಪ್ರಕರಣದ ಪ್ರಮುಖ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೇ, ಚಿನ್ನಾಭರಣ ಸೇರಿದಂತೆ 4.5 ಕೋಟಿ ಮೌಲ್ಯದ ವಸ್ತುಗಳನ್ನು ಇಡಿ ವಶಪಡಿಸಿಕೊಂಡಿದೆ.
ಪ್ರತಿದಿನ 2 ರಿಂದ 3 ಕೋಟಿ ವಸೂಲಿ:ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲೇ ಈ ಹಗರಣ ನಡೆದಿದೆ. ಕಲ್ಲಿದ್ದಲು ಸಾಗಣೆಗೆ ಸರ್ಕಾರದಿಂದ ಎನ್‌ಒಸಿ ಪಡೆಯಬೇಕಾಗಿತ್ತು. ಪ್ರತಿ ಟನ್‌ಗೆ 25 ರೂ.ಯಂತೆ ಲಂಚ ನೀಡಿ, ಈ ಹಣವನ್ನು ರಾಜಕಾರಣಿಗಳು ಮತ್ತು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಇದನ್ನು ವರ್ಗಾಯಿಸಲಾಗಿದೆ. ಪ್ರತಿ ದಿನ ಸುಮಾರು 2-3 ಕೋಟಿ ರೂಪಾಯಿ ಹಣ ಈ ರೀತಿಯಾಗಿ ಅಕ್ರಮ ನಡೆದಿದೆ ಎಂದು ಇಡಿ ಅಂದಾಜಿಸಿದೆ.
ಓದಿ:ಎಸ್ಬಿಐ ಬ್ಯಾಂಕ್ ಅಧ್ಯಕ್ಷರಿಗೆ ಕೊಲೆ ಬೆದರಿಕೆ, ಪ್ರಧಾನ ಕಚೇರಿ ಉಡಾಯಿಸುವುದಾಗಿ ಧಮ್ಕಿ.. ಪಾಕಿಸ್ತಾನದಿಂದ ಬಂದಿತ್ತಾ ಕರೆ?!