ಮುಂಬೈ:ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 13,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಆತನ ಪತ್ನಿ ಪ್ರೀತಿ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಇಡಿ ಹೊಸ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೋಕ್ಸಿ ಮತ್ತು ಅವರ ಪತ್ನಿ ಪ್ರೀತಿ ಪ್ರದ್ಯೋತ್‌ಕುಮಾರ್ ಕೊಠಾರಿ ವಿರುದ್ಧ ಫೆಡರಲ್ ಏಜೆನ್ಸಿ ಸಲ್ಲಿಸಿದ ಮೊದಲ ಪ್ರಾಸಿಕ್ಯೂಷನ್ ದೂರು ಇದಾಗಿದೆ. ಅಪರಾಧವನ್ನು ಮಾಡಲು ಪತಿಗೆ ಸಹಾಯ ಮಾಡಿದ ಆರೋಪವನ್ನು ಪ್ರೀತಿ ವಿರುದ್ಧ ಜಾರಿ ನಿರ್ದೇಶನಾಲಯವು (ED) ಹೊರಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಸಲ್ಲಿಸಲಾದ ಚಾರ್ಜ್ಶೀಟ್ನ್ನು ಮಾರ್ಚ್‌ನಲ್ಲಿ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾಯಿತು. ನ್ಯಾಯಾಲಯದ ಗಮನಕ್ಕೆ ಸೋಮವಾರ ಈ ಪ್ರಕರಣ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿಯನ್ನು ಹೊರತುಪಡಿಸಿ, ಏಜೆನ್ಸಿಯು ಚೋಕ್ಸಿಯ ಮೂರು ಕಂಪನಿಗಳಾದ - ಗೀತಾಂಜಲಿ ಜೆಮ್ಸ್ ಲಿಮಿಟೆಡ್, ಗಿಲಿ ಇಂಡಿಯಾ ಲಿಮಿಟೆಡ್ ಮತ್ತು ನಕ್ಷತ್ರ ಬ್ರಾಂಡ್ ಲಿಮಿಟೆಡ್, ನಿವೃತ್ತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಪ ವ್ಯವಸ್ಥಾಪಕ (ಬ್ರಾಡಿ ಹೌಸ್ ಶಾಖೆ, ಮುಂಬೈ) ಗೋಕುಲನಾಥ್ ಶೆಟ್ಟಿ ಅವರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. 2018 ಮತ್ತು 2020ರಲ್ಲಿ ಇಡಿ ಎರಡು ಚಾರ್ಜ್ ಶೀಟ್ ಸಲ್ಲಿಸಿದ್ದು, ಇದು ಚೋಕ್ಸಿ ವಿರುದ್ಧದ ಮೂರನೇ ಚಾರ್ಜ್‌ಶೀಟ್ ಆಗಿದೆ.
ಇದನ್ನೂ ಓದಿ:ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ
ಪ್ರೀತಿ ಅವರು ಯುಎಇ ಮೂಲದ ಹಿಲ್ಲಿಂಗ್‌ಡನ್ ಹೋಲ್ಡಿಂಗ್ಸ್ ಲಿಮಿಟೆಡ್, ಚಾಟಿಂಗ್ ಕ್ರಾಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಕೊಲಿಂಡೇಲ್ ಹೋಲ್ಡಿಂಗ್ಸ್ ಲಿಮಿಟೆಡ್ ಎಂಬ ಮೂರು ಕಂಪನಿಗಳ ಮಾಲೀಕರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ಮಾಡಿದ ಕಾನೂನು ವಿನಂತಿಯ ಆಧಾರದ ಮೇಲೆ ನೀರವ್ ಮೋದಿಯನ್ನು 2019 ರಲ್ಲಿ ಲಂಡನ್ ಅಧಿಕಾರಿಗಳು ಬಂಧಿಸಿ, ಲಂಡನ್ ಜೈಲಿನಲ್ಲಿರಿಸಿದ್ದಾರೆ. ಚೋಕ್ಸಿ, ಮೋದಿ ಮತ್ತು ಅವರ ಕುಟುಂಬ ಸದಸ್ಯರು, ಉದ್ಯೋಗಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ಇತರರ ಮೇಲೆ ಇಡಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) 2018 ರಲ್ಲಿ ಮುಂಬೈನ ಪಿಎನ್‌ಬಿಯ ಬ್ರಾಡಿ ಹೌಸ್ ಶಾಖೆಯಲ್ಲಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದೆ.