ನವದೆಹಲಿ:ಯುನಿಟೆಕ್ ಲಿಮಿಟೆಡ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುಗ್ರಾಮ್, ಗೋವಾ, ಚೆನ್ನೈ ಮತ್ತು ಇತರ ಸ್ಥಳಗಳಲ್ಲಿ 257 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ದೇಶ ಮತ್ತು ವಿದೇಶಗಳಲ್ಲಿ ಒಟ್ಟು ಜಪ್ತಿಯಾದ ಆಸ್ತಿಗಳ ಮೌಲ್ಯ 1,059.52 ಕೋಟಿ ರೂ.ಗಳಾಗಿದೆ.
ರಿಯಲ್ ಎಸ್ಟೇಟ್ ಹೂಡಿಕೆದಾರ ಕಂಪನಿಯಾಗಿರುವ ಯುನಿಟೆಕ್ ಲಿಮಿಟೆಡ್ ವಿರುದ್ಧ ಸುಪ್ರೀಂಕೋರ್ಟ್ ಆದೇಶದ ಮೇರೆಗೆ 2018ರ ಜೂನ್ 6ರಂದು ಇಡಿ ಮನಿ ಲಾಂಡರಿಂಗ್ ಕೇಸ್ ದಾಖಲಿಸಿತ್ತು. ತನಿಖೆಯ ವೇಳೆ ಒಟ್ಟು 6,452 ಕೋಟಿ ರೂ.ಗಳ ಅಕ್ರಮ ಪತ್ತೆಯಾಗಿತ್ತು.
ಅಲ್ಲದೇ, ತನಿಖೆಯ ಸಂದರ್ಭದಲ್ಲಿ ಕಂಪನಿಯ ಮಾಜಿ ಪ್ರಮೋಟರ್ಸ್ಗಳಾದ ಸಂಜಯ್ ಚಂದ್ರ, ಅಜಯ್ ಚಂದ್ರ ಹಾಗೂ ರಮೇಶ್ ಚಂದ್ರ, ಪ್ರೀತಿ ಚಂದ್ರ ಮತ್ತು ರಾಜೇಶ್ ಮಲಿಕ್ ಅವರನ್ನು ಬಂಧಿಸಿತ್ತು. ಈಗ ಇವರೆಲ್ಲರೂ ತಿಹಾರ್ ಜೈಲಿನಲ್ಲಿದ್ದಾರೆ.
ಈ ಹಿಂದೆ ಸಂಜಯ್ ಚಂದ್ರ, ಅಜಯ್ ಚಂದ್ರ ಅವರಿಗೆ ಸೇರಿದ ಆಸ್ತಿ ಮತ್ತು ಕಾರ್ನೋಸ್ಟಿ ಗ್ರೂಪ್, ಶಿವಾಲಿಕ್ ಗ್ರೂಪ್, ಟ್ರೈಕರ್ ಗ್ರೂಪ್, ಸಿಐಜಿ ರಿಯಾಲ್ಟಿ ಫಂಡ್, ಅಥೆಂಟಿಕ್ ಗ್ರೂಪ್ ಮತ್ತು ಶೆಲ್ ಕಂಪನಿಯ ಆಸ್ತಿಗಳನ್ನು ಇಡಿ ಜಪ್ತಿ ಮಾಡಿತ್ತು. ಈಗ ಮನೆಗಳು, ವಾಣಿಜ್ಯ ಘಟಕಗಳು, ಬ್ಯಾಂಕ್ ಖಾತೆಯಲ್ಲಿರುವ ಹಣ ಸೇರಿ 257 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಎಲ್ಲ ಆಸ್ತಿಗಳು ಸಿಐಜಿ (ಚಂದ್ರಾ ಇನ್ವೆಸ್ಟ್‌ಮೆಂಟ್ ಗ್ರೂಪ್) ರಿಯಾಲ್ಟಿ ಫಂಡ್ ಮತ್ತು ಅಥೆಂಟಿಕ್ ಗ್ರೂಪ್‌ನ ಒಡೆತನಕ್ಕೆ ಸೇರಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಸೋನಿಯಾ ಗಾಂಧಿಗೆ ಮತ್ತೆ ಸಮನ್ಸ್ ಜಾರಿ ಮಾಡಿದ ಇಡಿ: ಜುಲೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್