ಮುಂಬೈ(ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಸಚಿವ, ಎನ್ಸಿಪಿ ನಾಯಕ ನವಾಬ್ ಮಲಿಕ್ ಮತ್ತವರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಗೋವಾಲಾ ಕಾಂಪೌಂಡ್ (ಅಂದಾಜು 300 ಕೋಟಿ ರೂ. ಮೌಲ್ಯದ 3 ಎಕರೆ ಭೂ ಪ್ರದೇಶ), ಒಸ್ಮಾನಾಬಾದ್ ಜಿಲ್ಲೆಯಲ್ಲಿರುವ 147.79 ಎಕರೆ ಕೃಷಿ ಭೂಮಿ, ಕುರ್ಲಾದಲ್ಲಿ ಮೂರು ಫ್ಲಾಟ್ಗಳು ಮತ್ತು ಬಂದ್ರಾದಲ್ಲಿರುವ ಎರಡು ಫ್ಲಾಟ್ಗಳು, ಒಂದು ವಾಣಿಜ್ಯ ಘಟಕ ಹಾಗ ಸಾಲಿಡಸ್ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮಲಿಕ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವರಾದ ಮಲಿಕ್ ಅವರಿಗೆ ಅಕ್ರಮ ಹಣ ಸಂದಾಯ ವಿಷಯವಾಗಿ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದೆ. ಅಲ್ಲದೇ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಎನ್ನಲಾಗುತ್ತಿದೆ. ಹೀಗಾಗಿ ಮಲಿಕ್ ಅವರನ್ನು ಫೆ.23ರಂದು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.