ನವದೆಹಲಿ:ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಸಂಬಂಧಿಸಿದ 538 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ. ಗೋಯಲ್ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಲಂಡನ್, ದುಬೈ ಮತ್ತು ಭಾರತದ ಕೆಲವು ರಾಜ್ಯಗಳಲ್ಲಿನ ಕಂಪನಿಗಳ ಹೆಸರಿನಲ್ಲಿ ನೋಂದಾಯಿಸಲಾದ 17 ವಸತಿ ಫ್ಲಾಟ್‌ಗಳು, ಬಂಗಲೆಗಳು, ವಾಣಿಜ್ಯ ಕಟ್ಟಡಗಳು ಇದರಲ್ಲಿ ಸೇರಿವೆ.
ಲಂಡನ್, ದುಬೈ ಮತ್ತು ಭಾರತದ ವಿವಿಧ ನಗರಗಳಲ್ಲಿ ಸ್ಥಾಪಿತಗೊಂಡಿರುವ ಜೆಟೈರ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಟ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ಗೆ ಸಂಬಂಧಿಸದ ಆಸ್ತಿಗಳು ನರೇಶ್ ಗೋಯಲ್, ಅವರ ಪತ್ನಿ ಅನಿತಾ ನರೇಶ್ ಮತ್ತು ಮಗ ನಿವಾನ್ ಅವರಂತಹ ವಿವಿಧ ಕಂಪನಿಗಳ ಹೆಸರಿನಲ್ಲಿವೆ ಎಂದು ಫೆಡರಲ್ ಏಜೆನ್ಸಿ ತಿಳಿಸಿದೆ.