ನವದೆಹಲಿ:ಸಿಎಂಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಪ್ ಸರ್ಕಾರದ ವಿವಾದಿತ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಇಂದು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿದರು. ಇದೇ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಂತರ ಆಪ್ನ ಎರಡನೇ ಪ್ರಮುಖ ನಾಯಕನ ಅರೆಸ್ಟ್ ಆಗಿದೆ.
ಇಂದು ಸಂಜೆ ಬಂಧನಕ್ಕೂ ಮುನ್ನ ಅಂದರೆ ಬೆಳಗ್ಗೆ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಹಿರಿಯ ನಾಯಕರೂ ಆದ ಸಂಜಯ್ ಸಿಂಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಇದೇ ವೇಳೆ, ಇತರರ ನಿವಾಸಗಳಲ್ಲೂ ಶೋಧ ಕಾರ್ಯ ಕೈಗೊಂಡಿದ್ದರು. ಇದರ 10 ಗಂಟೆಗಳ ನಂತರ ಮನೆಯಲ್ಲೇ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಈ ಹಿಂದೆಯೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಹಾಗೂ ಅವರ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
2021-22ರಲ್ಲಿ ದೆಹಲಿ ಸರ್ಕಾರ ಹೊಸ ಮದ್ಯ ನೀತಿ ಸಿದ್ಧಪಡಿತ್ತು. ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ನೀತಿ ರೂಪಿಸಲಾಗಿತ್ತು. ಆದರೆ, ಲಂಚ ಪಾವತಿಸಿದ ಕೆಲವು ಡೀಲರ್‌ಗಳ ಪರವಾಗಿ ನೀತಿ ಜಾರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ, ಬಿಜೆಪಿ ನಿರಂತರವಾಗಿ ದೆಹಲಿಯ ಆಪ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿತ್ತು. ಮತ್ತೊಂದೆಡೆ, ಈ ಎಲ್ಲ ಆರೋಪಗಳನ್ನೂ ಆಪ್ ಬಲವಾಗಿ ನಿರಾಕರಿಸುತ್ತಲೇ ಕೊನೆಗೆ ಹೊಸ ಮದ್ಯ ನೀತಿಯನ್ನು ರದ್ದುಪಡಿಸಿದೆ.