ಕೋಲ್ಕತ್ತಾ:ಭಾರತದ ಹಿರಿಯ ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು ನಿಧನರಾದ ವದಂತಿ ಇಂದು (ಮಂಗಳವಾರ) ಹರಡಿತ್ತು. 2023 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪಡೆದ ಕ್ಲೌಡಿಯಾ ಗೋಲ್ಡಿನ್ ಅವರ ಹೆಸರಿನ ನಕಲಿ ಖಾತೆಯಲ್ಲಿ ಈ ಬಗ್ಗೆ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಅಮರ್ತ್ಯ ಸೇನ್ ಅವರ ಪುತ್ರಿ ನಂದನಾ ಸ್ಪಷ್ಟನೆ ನೀಡಿದ್ದು, "ಇದೊಂದು ಸುಳ್ಳು ಸುದ್ದಿ. ಸೇನ್ ಅವರು ಜೀವಂತವಾಗಿದ್ದಾರೆ" ಎಂದು ತಿಳಿಸಿದರು.
ಈಟಿವಿ ಭಾರತ್ ಅಮರ್ತ್ಯ ಸೇನ್ ಅವರ ಪುತ್ರಿಯನ್ನು ಸಂಪರ್ಕಿಸಿದ್ದು, "ತಂದೆ ಜೀವಂತವಾಗಿದ್ದಾರೆ. ಆರೋಗ್ಯವೂ ಉತ್ತಮವಾಗಿದೆ. ಸಾವಿನ ಸುದ್ದಿ ಸುಳ್ಳು" ಎಂದು ಅವರು ಹೇಳಿದರು.
ನಕಲಿ ಖಾತೆಯಲ್ಲಿ ಸಾವಿನ ಸುದ್ದಿ:ಅರ್ಥಶಾಸ್ತ್ರಜ್ಞೆ ಕ್ಲೌಡಿಯಾ ಗೋಲ್ಡಿನ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆಯಲಾಗಿದ್ದು, ಅದರಲ್ಲಿ ಅಮರ್ತ್ಯ ಸೇನ್ ಮೃತಪಟ್ಟಿದ್ದಾಗಿ ಪೋಸ್ಟ್ ಮಾಡಲಾಗಿತ್ತು. 'ಇದೊಂದು ಬೇಸರದ ಸುದ್ದಿ. ನನ್ನ ಪ್ರೀತಿಯ ಪ್ರೊಫೆಸರ್ ಅಮರ್ತ್ಯ ಸೇನ್' ಅಗಲಿದ್ದಾರೆ ಎಂದು ಅದರಲ್ಲಿ ಬರೆಯಲಾಗಿತ್ತು. ತಕ್ಷಣವೇ ಎಲ್ಲೆಡೆ ಗಾಳಿ ಸುದ್ದಿ ಹರಿದಾಡಿತ್ತು. ಹಿರಿಯ ಅರ್ಥಶಾಸ್ತ್ರಜ್ಞರು ಸಾವನ್ನಪ್ಪಿದ್ದಾಗಿ ಹಲವು ಮಾಧ್ಯಮಗಳು ಕೂಡ ವರದಿ ಮಾಡಿದ್ದವು.
ವದಂತಿ ಹರಡುತ್ತಿದ್ದಂತೆ ಅಮರ್ತ್ಯ ಸೇನ್ ಸಾವನ್ನಪ್ಪಿದ್ದಾಗಿ ಪ್ರಕಟಿಸಲಾಗಿದ್ದ ಖಾತೆಯಲ್ಲೇ, 'ಇದೊಂದು ನಕಲಿ ಖಾತೆ. ಇಟಲಿಯ ಪತ್ರಕರ್ತ ಟೊಮಾಸೊ ಡೆಬೆನೆಡೆಟ್ಟಿ ಅವರು ಈ ಖಾತೆ ಆರಂಭಿಸಿದ್ದಾರೆ' ಎಂದು ಪೋಸ್ಟ್ ಮಾಡಲಾಗಿದೆ.