ನವದೆಹಲಿ:ಭಾರತದ ಚುನಾವಣಾ ಆಯೋಗವು (ಇಸಿಐ) ಮೂರು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾಗಳಿಗೆ ವಿಧಾನಸಭೆ ಚುನಾವಣೆ ದಿನಾಂಕವನ್ನು ಬುಧವಾರ ಪ್ರಕಟಿಸಿದೆ. ತ್ರಿಪುರಾ ಫೆಬ್ರವರಿ 16 ರಂದು ಚುನಾವಣೆ ನಡೆಯಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮೂರೂ ರಾಜ್ಯಗಳ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ. ತ್ರಿಪುರಾದಲ್ಲಿ ನಾಮಪತ್ರ ಸಲ್ಲಿಸಲು ಜನವರಿ 30 ಕೊನೆಯ ದಿನಾಂಕವಾಗಿದ್ದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗೆ ಇದೇ ಫೆಬ್ರವರಿ 7 ಅಂತಿಮ ದಿನವಾಗಿದೆ. ಫೆಬ್ರವರಿ 27 ರಂದು ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
"ಮಾರ್ಚ್‌ನಲ್ಲಿ ಶಾಲಾ ಪರೀಕ್ಷೆಗಳು ನಡೆಯಲಿರುವ ಕಾರಣ, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಫೆಬ್ರವರಿಯೊಳಗೆ ಚುನಾವಣೆಯನ್ನು ಮುಗಿಸಲು ಚುನಾವಣಾ ಆಯೋಗವು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದೆ. ಸಿಬಿಎಸ್‌ಇ ಶಾಲೆಯಲ್ಲಿ ಯಾವುದೇ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದಿಲ್ಲ" ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.
ಮೂರು ರಾಜ್ಯಗಳಲ್ಲಿ 31.47 ಲಕ್ಷ ಮಹಿಳಾ ಮತದಾರರು, 80 ವರ್ಷಕ್ಕಿಂತ ಮೇಲ್ಪಟ್ಟ 97,000ಕ್ಕೂ ಹೆಚ್ಚು ಮತದಾರರು ಮತ್ತು 31,700 ವಿಕಲಚೇತನರು ಸೇರಿದಂತೆ 62.8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಎಲ್ಲ ಮೂರು ರಾಜ್ಯಗಳು ಭೂಪ್ರದೇಶ ಸಂಬಂಧಿತ ಸವಾಲುಗಳನ್ನು ಗಮನಿಸಿ ಆಯೋಗವು 'ಮುಕ್ತ ಮತ್ತು ನ್ಯಾಯಯುತ' ಚುನಾವಣೆಗಳನ್ನು ನಡೆಸಲು ಚಿಂತಿಸಿದೆ ಮತ್ತು ಯಾವುದೇ ಚುನಾವಣಾ ಅಕ್ರಮಗಳು, ಹಿಂಸಾಚಾರದ ಘಟನೆಗಳು ನಡೆಯದಂತೆ ನೋಡಿಕೊಕಳ್ಳಲಾಗುವುದು ಎಂದು ಖಚಿತಪಡಿಸಿದ್ದಾರೆ.