ಮುಂಬೈ/ನವದೆಹಲಿ:ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಬಾಳಾಸಾಹೆಬಂಚಿ ಶಿವಸೇನೆ ಪಕ್ಷಕ್ಕೆ ಚುನಾವಣಾ ಆಯೋಗವು ಇಂದು (ಮಂಗಳವಾರ) 'ಎರಡು ಕತ್ತಿಗಳು ಮತ್ತು ಗುರಾಣಿ' ಚಿಹ್ನೆಯನ್ನಾಗಿ ಹಂಚಿಕೆ ಮಾಡಿದೆ. ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ನಿನ್ನೆ ‘ಬಾಳಾಸಾಹೆಬಂಚಿ ಶಿವಸೇನಾ’ ಎಂಬ ಹೆಸರನ್ನು ನೀಡಿತ್ತು. ಇಂದು ಹೊಸ ಚಿಹ್ನೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಧೇರಿ ಪೂರ್ವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹಾಕುವ ಸಂಬಂಧ ಏಕನಾಥ್ ಶಿಂಧೆ ನೇತೃತ್ವದ ಬಣವಾದ ಬಾಳಾಸಾಹೆಬಂಚಿ ಶಿವಸೇನಾ ಮಂಗಳವಾರ ತನ್ನ ಮೂರು ಚುನಾವಣಾ ಚಿಹ್ನೆಗಳ ಪಟ್ಟಿಯನ್ನು ಆಯ್ಕೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗವು ಎರಡು ಕತ್ತಿಗಳು ಮತ್ತು ಗುರಾಣಿಅನ್ನು ಹಂಚಿಕೆ ಮಾಡಿದೆ.
ಇನ್ನು ಇತ್ತೀಚೆಗೆ ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಎರಡೂ ಸೇನಾ ಬಣಗಳ ನಡುವಿನ ವೈಷಮ್ಯದ ನಂತರ ಮಧ್ಯಂತರ ಅವಧಿಗೆ 'ಬಿಲ್ಲು ಮತ್ತು ಬಾಣ' ಚಿಹ್ನೆ ಸ್ಥಗಿತಗೊಳಿಸಿತ್ತು. ಅಲ್ಲದೇ 'ಶಿವಸೇನೆ' ಎಂಬ ಹೆಸರನ್ನು ಬಳಸದಂತೆ ಎರಡು ಕಡೆಯವರಿಗೂ ಆದೇಶಿಸಿತ್ತು.