ಹೈದರಾಬಾದ್: ತೆಲಂಗಾಣ ಚುನಾವಣೆಗೆ ಹೊಸ್ತಿಲಲ್ಲಿ ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. 'ರೈತುಬಂಧು' ಯೋಜನೆಯಡಿ ರೈತರಿಗೆ ನೀಡುತ್ತಿದ್ದ ಆರ್ಥಿಕ ನೆರವು ವಿತರಣೆಗೆ ನೀಡಿದ್ದ ಅನುಮತಿ ಚುನಾವಣಾ ಆಯೋಗ ಹಿಂಪಡೆದಿದೆ.
ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ. ಈ ತಿಂಗಳ 28ರ ಮೊದಲು ರೈತಬಂಧು ವಿತರಿಸಲು ತೆಲಂಗಾಣ ಸರ್ಕಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿತ್ತು. ಆದರೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ರೈತ ಬಂಧು ಯೋಜನೆಯ ಪ್ರಸ್ತಾಪ ಮಾಡಬಾರದು ಎಂದು ಚುನಾವಣಾ ಆಯೋಗ ಷರತ್ತು ವಿಧಿಸಿತ್ತು. ಆದರೆ, ಸಚಿವ ಹರೀಶ್ ರಾವ್ ಅವರು ಚುನಾವಣಾ ಪ್ರಚಾರದ ವೇಳೆ ರೈತಬಂಧು ಕುರಿತು ಪ್ರಸ್ತಾಪ ಮಾಡಿದ್ದು, ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ ಆಯೋಗ ಅನುಮತಿ ಹಿಂಪಡೆದಿದೆ.
ಇದಿರಂದ ಬಿಆರ್ ಎಸ್ ಪಕ್ಷಕ್ಕೆ ಪ್ರಬಲ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ 2018ರ ಚುನಾವಣೆಗೂ ಮುನ್ನ ರೈತಬಂಧು ಯೋಜನೆಯಡಿ ರೈತರ ಖಾತೆಗೆ ಹಣ ಜಮೆ ಮಾಡಲಾಗಿತ್ತು. ಆ ನಂತರ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣೆ ಹಿಡಿದಿತ್ತು. ಈ ಬಾರಿಯೂ ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಅಂದರೆ ನವೆಂಬರ್ 28 ರಂದು ರಾಜ್ಯಾದ್ಯಂತ 70 ಲಕ್ಷ ರೈತರ ಖಾತೆಗಳಿಗೆ ರೈತಬಂಧು ಹಣವನ್ನು ಜಮೆ ಮಾಡಲು ಚುನಾವಣಾ ಆಯೋಗ ಅನಮತಿ ನೀಡಿತ್ತು. ರೈತಬಂಧು ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕ 10 ಸಾವಿರವನ್ನು ನೀಡಲಾಗುತ್ತದೆ.