ನವದೆಹಲಿ:ಮಾದರಿ ನೀತಿ ಸಂಹಿತೆಯ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಿಂದ ತೆಗೆದುಹಾಕುವಂತೆ ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳು ಇರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ಚುನಾವಣಾ ಆಯೋಗವು ಚುನಾವಣಾ ನಿಯಮಗಳನ್ನು ಪಾಲಿಸುವಂತೆ ಪತ್ರದ ಮೂಲಕ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ.
ಮಾಹಿತಿಯ ಪ್ರಕಾರ, ಆರೋಗ್ಯ ಸಚಿವಾಲಯಕ್ಕೆ ಕಳುಹಿಸಿದ ಪತ್ರದಲ್ಲಿ, ಚುನಾವಣಾ ಆಯೋಗವು ನೀತಿ ಸಂಹಿತೆಯ ಕೆಲವು ನಿಬಂಧನೆಗಳನ್ನು ಉಲ್ಲೇಖಿಸಿದೆ. ಅದು ಸರ್ಕಾರದ ಖರ್ಚಿನ ಮೇಲೆ ಜಾಹೀರಾತನ್ನು ನಿಷೇಧಿಸುತ್ತದೆ. ಚುನಾವಣಾ ಆಯೋಗ ಮತ್ತು ಸಚಿವಾಲಯದ ನಡುವಿನ ಸಂವಹನದ ಬಗ್ಗೆ ತಿಳಿದಿರುವ ಮೂಲಗಳು ಚುನಾವಣಾ ಆಯೋಗವು ಯಾವುದೇ ವ್ಯಕ್ತಿ ಅಥವಾ ವ್ಯಕ್ತಿತ್ವವನ್ನು ಉಲ್ಲೇಖಿಸಿಲ್ಲ. ಆದರೆ ನೀತಿ ಸಂಹಿತೆಯ ನಿಬಂಧನೆಗಳನ್ನು ಪಾಲಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ.
ತೃಣಮೂಲ ಕಾಂಗ್ರೆಸ್ ದೂರು:
ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಪ್ರಧಾನಿ ಮೋದಿಯವರ ಛಾಯಾಚಿತ್ರ ಪಶ್ಚಿಮ ಬಂಗಾಳ ಮತ್ತು ಇತರ ಚುನಾವಣಾ ರಾಜ್ಯಗಳಲ್ಲಿನ ಕೋ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಪಡೆದ ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಪ್ರಧಾನ ಮಂತ್ರಿಯ ಅಧಿಕಾರದ ದುರುಪಯೋಗ ಎಂದು ದೂರಿದೆ.