ನವದೆಹಲಿ: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶನಿವಾರ ಸಂಜೆಯೊಳಗೆ ಪ್ರತಿಕ್ರಿಯೆ ನೀಡುವಂತೆ ರಾಹುಲ್ ಅವರಿಗೆ ಸೂಚನೆ ನೀಡಲಾಗಿದೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ 'ಪನೌತಿ' (ಅಪಶಕುನ) ಕಾರಣ ಮತ್ತು 'ಜೇಬ್ಕತ್ರ' (ಜೇಬುಗಳ್ಳರು) ಹಾಗೂ ಸಾಲ ಮನ್ನಾ ಕುರಿತು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ನವೆಂಬರ್ 22ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಯಾಟು ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಕಟು ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ಬಗ್ಗೆ ಅಪಹಾಸ್ಯ ಮತ್ತು ಅಸಹ್ಯಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೀಡಿದೆ. ಪ್ರಧಾನಿಯನ್ನು 'ಪಿಕ್‌ಪಾಕೆಟರ್'ಗೆ ಹೋಲಿಸುವುದು ಮತ್ತು 'ಪನೌತಿ' ಪದವನ್ನು ಬಳಸುವುದು ರಾಷ್ಟ್ರೀಯ ರಾಜಕೀಯ ಪಕ್ಷದ ನಾಯಕರೊಬ್ಬರಿಗೆ ತಕ್ಕುದಲ್ಲ ಎಂದು ಬಿಜೆಪಿ ಹೇಳಿದೆ. ಕಳೆದ 9 ವರ್ಷಗಳಲ್ಲಿ 14,00,000 ಕೋಟಿ ರೂ.ಗಳ ಸಾಲ ಮನ್ನಾದ ಆರೋಪವು ಆಧಾರ ರಹಿತವಾಗಿದೆ ಎಂಬುವುದಾಗಿ ಬಿಜೆಪಿ ತಿಳಿಸಿದೆ ಎಂದು ರಾಹುಲ್ ಗಾಂಧಿ ಅವರಿಗೆ ಆಯೋಗ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಇದಲ್ಲದೆ, ರಾಹುಲ್ ಗಾಂಧಿ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (4), ಐಪಿಸಿಯ ಸೆಕ್ಷನ್ 171ಜಿ, 504, 505 (2), ಮತ್ತು 499 ಮತ್ತು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂಬ ದೂರು ಸ್ವೀಕರಿಸಲಾಗಿದೆ. ಈ ಕುರಿತು ನವೆಂಬರ್ 25ರೊಳಗೆ ವಿವರಣೆ ಸಲ್ಲಿಸಬೇಕು. ಅಷ್ಟರೊಳಗೆ ಯಾವುದೇ ಉತ್ತರವನ್ನು ಸಲ್ಲಿಸದಿದ್ದರೆ ಆಯೋಗವು ಸೂಕ್ತದ ಕ್ರಮ ಕುರಿತು ಪರಿಗಣಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.