ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕೇಂದ್ರ ಚುನಾವಣಾ ಆಯೋಗ 24 ಗಂಟೆಗಳ ಚುನಾವಣಾ ನಿರ್ಬಂಧ ವಿಧಿಸಿದೆ. ಹೀಗಾಗಿ ಇಂದು ರಾತ್ರಿ 8 ಗಂಟೆಯಿಂದ ನಾಳೆ ರಾತ್ರಿ 8 ಗಂಟೆಯವರೆಗೆ ಯಾವುದೇ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಪಶ್ಚಿಮ ಬಂಗಾಳದಲ್ಲಿ 5ನೇ ಹಂತದ ಮತದಾನಕ್ಕಾಗಿ ಮಮತಾ ಬ್ಯಾನರ್ಜಿ ಪ್ರಚಾರ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಅವರಿಗೆ ಆಯೋಗ ಶಾಕ್ ನೀಡಿದೆ. ಆಯೋಗದ ಈ ನಿರ್ಧಾರದ ವಿರುದ್ಧ ಸಿಡಿದೆದ್ದಿದ್ದು, ನಾಳೆ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ನೀತಿ ಸಂಹಿತಿ ಉಲ್ಲಂಘನೆ ಮಾಡಿರುವ ಕಾರಣ ಈ ನಿರ್ಬಂಧ ವಿಧಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಕೇವಲ ಬಿಜೆಪಿ ಹೇಳಿದ್ದು ಕೇಳಬೇಡಿ: ಚುನಾವಣಾ ಆಯೋಗಕ್ಕೆ 'ಕೈ' ಮುಗಿಯುತ್ತೇನೆಂದ ಮಮತಾ!
ಮೂರನೇ ಹಂತದ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಹೂಗ್ಲಿ ಜಿಲ್ಲೆ ತಾರಕೇಶ್ವರದಲ್ಲಿ ಮಮತಾ ಬ್ಯಾನರ್ಜಿ ಕೋಮುವಾದಿ ಆಧಾರದ ಮೇಲೆ ಮತಗಳನ್ನ ಬಹಿರಂಗವಾಗಿ ಕೇಳಬೇಕು. ಅಲ್ಪಸಂಖ್ಯಾತ ಮತಗಳನ್ನ ವಿಭಜಿಸಬೇಡಿ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದ ಚು. ಆಯೋಗ 48 ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿತ್ತು.
ಇದೀಗ ಅದೇ ವಿಚಾರವಾಗಿ ಅವರ ಮೇಲೆ ಮುಂದಿನ 24 ಗಂಟೆಗಳ ಕಾಲ ಚುನಾವಣೆ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.
ಮಮತಾ ಪ್ರತಿಕ್ರಿಯೆ:ಭಾರತ ಚುನಾವಣಾ ಆಯೋಗ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ನಿರ್ಧಾರ ವಿರೋಧಿಸಿ ನಾಳೆ ಮಧ್ಯಾಹ್ನ 12ರಿಂದ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ 8 ಹಂತದಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತ ಮುಕ್ತಾಯಗೊಂಡಿದ್ದು, 5ನೇ ಹಂತ ಬರುವ ಏಪ್ರಿಲ್ 17ರಂದು ನಡೆಯಲಿದೆ.