ಜೈಪುರ:ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇಂದು ಬೆಳಗ್ಗೆ ಅರ್ಧಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪನದ ಅನುಭವವಾಗಿದೆ. ನಗರದ ಕೆಲವೆಡೆ ಭಯಭೀತರಾದ ಜನರು ಮನೆಯಿಂದ ಹೊರ ಓಡಿ ಬಂದಿದ್ದರು. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ, ಮುಂಜಾನೆ 4:10ಕ್ಕೆ ಮೊದಲ ಬಾರಿ, 4:23ಕ್ಕೆ ಎರಡನೇ ಬಾರಿ ಮತ್ತು 4:25ಕ್ಕೆ ಮೂರನೇ ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 3.1, 3.4 ಮತ್ತು 4.4 ತೀವ್ರತೆ ದಾಖಲಾಗಿದೆ.
ಕಳೆದ ತಿಂಗಳು ರಾಜಸ್ಥಾನದ ಬಿಕಾನೇರ್‌ನಲ್ಲಿ ರಾತ್ರಿ ಸಮಯ 11:36ಕ್ಕೆ 4.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಯಾವುದೇ ಅನಾಹುತಗಳು ನಡೆದಿಲ್ಲ. ಭೂಮಿ ನಡುಗಿದ ಕಾರಣ ಜನರು ತೀವ್ರ ಆತಂಕಕ್ಕೀಡಾಗಿದ್ದರು. ಬಿಕಾನೇರ್ ಆಗಾಗ್ಗೆ ಕಂಪನಕ್ಕೆ ತುತ್ತಾಗಲೇ ಇರುವ ಪ್ರದೇಶ. ಇದೀಗ ಒಂದು ತಿಂಗಳ ಅಂತರದಲ್ಲೇ ರಾಜಸ್ಥಾನದಲ್ಲಿ ಮೂರು ಬಾರಿ ಘಟನೆ ಜರುಗಿದೆ.
ಭೂಕಂಪನದ ವಿಡಿಯೋವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಭೂಮಿ ಕಂಪಿಸಿರುವುದನ್ನು ನೋಡಬಹುದು. ಭೂಕಂಪನದ ಬಗ್ಗೆ ಸ್ಥಳೀಯರೊಬ್ಬರು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ, "ಬೆಳಗ್ಗೆ 4:10ಕ್ಕೆ ಭೂಮಿ ಕಂಪಿಸಲು ಆರಂಭಿಸಿತು. ಮನೆಯಲ್ಲಿ ನಿದ್ರಿಸುತ್ತಿದ್ದ ನಾವು ಕುಟುಂಬಸಮೇತರಾಗಿ ಹೊರಗೆ ಓಡಿ ಬಂದೆವು. ಅಕ್ಕಪಕ್ಕದ ನಿವಾಸಿಗಳೂ ಕೂಡಾ ಗಾಬರಿಯಿಂದ ಹೊರ ಬಂದಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ" ಎಂದು ಹೇಳಿದರು.