ನವದೆಹಲಿ/ ಕಾಬೂಲ್ :ಜಪಾನ್ನಲ್ಲಿ ಪ್ರಬಲ ಭೂಕಂಪನಕ್ಕೆ ಸುನಾಮಿ ಉಂಟಾಗಿ 50 ಕ್ಕೂ ಅಧಿಕ ಜನರು ಸಾವಿಗೀಡಾದ ಘಟನೆ ಬೆನ್ನಲ್ಲೇ, ಭಾರತದ ಕೆಲ ಭಾಗ ಮತ್ತು ಅಫ್ಘಾನಿಸ್ತಾನದಲ್ಲಿ ಕೂಡ ಭೂಮಿ ನಡುಗಿದೆ. ಕಡಿಮೆ ತೀವ್ರತೆಯ ಕಂಪನಗಳು ಕಂಡುಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮಣಿಪುರ, ಪಶ್ಚಿಮ ಬಂಗಾಳದಲ್ಲಿ ಕಂಪನ:ಮಂಗಳವಾರ ರಾತ್ರಿ 10.35 ನಿಮಿಷಕ್ಕೆ ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್ಎಸ್ಸಿ) ತಿಳಿಸಿದೆ. ಭೂಕಂಪವು ರಾತ್ರಿ ವೇಳೆ ಆಗಿದ್ದು, 5 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ. ಯಾವುದೇ ದೊಡ್ಡ ಪ್ರಮಾಣದಲ್ಲಿ ಸಂಭವಿಸಿಲ್ಲ. ಭೂಮಿ ನಡುಗಿದಾಗ ಜನರು ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ಮಣಿಪುರದಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪವು ಉಖ್ರುಲ್ ಪ್ರದೇಶದಲ್ಲಿ ಮಧ್ಯರಾತ್ರಿ 12.01 ನಿಮಿಷಕ್ಕೆ ಸಂಭವಿಸಿದೆ. ಜನರು ನಿದ್ರೆಯಲ್ಲಿದ್ದಾಗ ದಿಢೀರ್ ಭೂಮಿ ಅಲುಗಾಡಿದೆ. ಇದರಿಂದ ಗಾಬರಿಯಾದ ಜನರು ಕೆಲಕಾಲ ಆತಂಕಕ್ಕೀಡಾಗಿದ್ದರು. ಮನೆಯಲ್ಲಿ ಪಾತ್ರೆಗಳು ನೆಲಕ್ಕುರುಳಿ ಬಿದ್ದಿವೆ. ಹಠಾತ್ ನಡುಕದಿಂದ ಜನರು ನಿದ್ದೆಗೆಡುವಂತಾಗಿದೆ. ಉಕ್ರುಲ್ ಪ್ರದೇಶದ ಸುತ್ತಲ್ಲೂ ಬುಧವಾರ ಮಧ್ಯರಾತ್ರಿ 26 ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಕಂಡುಬಂದಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.