ಗ್ಯಾಂಗ್ಟಕ್(ಸಿಕ್ಕೀಂ): ಕಳೆದ ಕೆಲ ದಿನಗಳ ಹಿಂದಷ್ಟೇ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪನವು ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಇದೀಗ ಈಶಾನ್ಯ ರಾಜ್ಯ ಸಿಕ್ಕೀಂನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಸಿಕ್ಕೀಂನ ಉತ್ತರಕ್ಕೆ 70 ಕಿಲೋ ಮೀಟರ್ ದೂರದಲ್ಲಿರುವ ಯುಕ್ಸೋಮ್ ಎಂಬಲ್ಲಿ ಇಂದು ಬೆಳಗಿನ ಜಾವ 4.15 ರ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 4.3 ರಷ್ಟು ದಾಖಲಾಗಿದೆ.
ಭೂಕಂಪನದ ಕೇಂದ್ರವು ಯುಕ್ಸೋಮ್‌ನಿಂದ 70 ಕಿ.ಮೀ ದೂರದಲ್ಲಿದೆ. ಭೂಮಿಯ ಒಳಭಾಗದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಘಟನೆಯಿಂದ ಸದ್ಯಕ್ಕೆ ಪ್ರಾಣ ಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನೇಪಾಳದಲ್ಲಿ ಆಗಾಗ ಕಂಪಿಸುತ್ತಿರುವ ಭೂಮಿ: ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಕಳೆದ ವರ್ಷ ಡಿಸೆಂಬರ್ 28, 2022 ರಂದು ಮಧ್ಯಾಹ್ನ 1 ಮತ್ತು 2 ಗಂಟೆಗೆ ಎರಡು ಭೂಕಂಪನಗಳು ಸಂಭವಿಸಿದವು. ಈ ವೇಳೆ ರಿಕ್ಟರ್ ಮಾಪಕದಲ್ಲಿ 4.7 ಮತ್ತು 5.3 ರಲ್ಲಿ ತೀವ್ರತೆ ದಾಖಲಾಗಿತ್ತು.
ಇದನ್ನೂ ಓದಿ:ದೆಹಲಿಯಲ್ಲಿ ಕಂಪಿಸಿದ ಭೂಮಿ: ನೇಪಾಳದಲ್ಲಿ ಕಂಪನದ ಕೇಂದ್ರ ಬಿಂದು