ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಇಂದು ಮುಂಜಾನೆ ಭೂ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಶುಕ್ರವಾರ ಮುಂಜಾನೆ 5.01 ಗಂಟೆ ಸುಮಾರಿಗೆ 3.6 ತೀವ್ರತೆಯ ಭೂಕಂಪನ ಆಗಿದೆ ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಮಿಯ 10 ಕಿ ಮೀ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ತಿಳಿಸಿದೆ. ಈ ಬಗ್ಗೆ ರಾಷ್ಟ್ರೀಯ ಕೇಂದ್ರ ಭೂಕಂಪಶಾಸ್ತ್ರ ಇಲಾಖೆಯ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಭೂಕಂಪದ ಕೇಂದ್ರಬಿಂದು ಕತ್ರಾದಿಂದ ಪೂರ್ವಕ್ಕೆ 97 ಕಿಲೋಮೀಟರ್ ದೂರದಲ್ಲಿದೆ. ಭೂಕಂಪದ ಅಕ್ಷಾಂಶ ಮತ್ತು ರೇಖಾಂಶಗಳು ಕ್ರಮವಾಗಿ 33.10 ಡಿಗ್ರಿ ಮತ್ತು 75.97 ಡಿಗ್ರಿ ಎಂದು ಕಂಡುಬಂದಿದೆ. ಎಲ್ಲಿಯೂ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬೆಳಿಗ್ಗೆ 9.26 ಕ್ಕೆ 46 ಕಿಲೋಮೀಟರ್ ಆಳದಲ್ಲಿ ಭೂಕಂಪನ ಆಗಿದೆ ಎಂದು ರಿಕ್ಟರ್ ಮಾಪಕದಲ್ಲಿ ತಿಳಿದು ಬಂದಿತ್ತು. ಫೆಬ್ರವರಿ 13 ರಂದು ಅಸ್ಸಾಂನ ಹೊಜೈನಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಪ್ರದೇಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ರಾತ್ರಿ 11.57 ಕ್ಕೆ ಆಗಿತ್ತು ಎಂದು ವರದಿಯಾಗಿದೆ ರಾಷ್ಟ್ರೀಯ ಕೇಂದ್ರ ಭೂಕಂಪಶಾಸ್ತ್ರ ಇಲಾಖೆ ಮಾಹಿತಿ ನೀಡಿತ್ತು.
ಟರ್ಕಿ - ಸಿರಿಯಾ ಭೂಕಂಪದಲ್ಲಿ ಸಾವಿನ ಸಂಖ್ಯೆ 41000ಕ್ಕೆ ಏರಿಕೆ:ಫೆಬ್ರವರಿ 6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಆದ 7.8 ರ ತೀವ್ರತೆಯ ಭೂಕಂಪದಲ್ಲಿ ಸಾವಿನ ಸಂಖ್ಯೆ 41,000ಕ್ಕೆ ಏರಿಕೆಯಾಗಿದೆ. ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ. ಟರ್ಕಿಯ ದಕ್ಷಿಣ ನಗರವಾದ ಕಹ್ರಮನ್ಮರಸ್‌ನಲ್ಲಿ ಇಬ್ಬರು ಮಹಿಳೆಯರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಭೂಕಂಪದ ಒಂಬತ್ತು ದಿನಗಳ ನಂತರ ತಾಯಿ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿದೆ. ವಿಶ್ವ ಸಂಸ್ಥೆ ಭೂಕಂಪನ ತೀವ್ರತೆಯನ್ನು ಕಂಡು 50,000 ಸಾವುಗಳು ಸಂಭವಿಸಬಹುದು ಎಂದು ಸೂಚಿಸಿತ್ತು.
'ಆಪರೇಷನ್ ದೋಸ್ತ್' ಅಡಿಯಲ್ಲಿ ಭಾರತದ ಆರೋಗ್ಯ ಸಚಿವಾಲಯವು ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಜೀವ ಉಳಿಸುವ ಮಾನವೀಯ ವೈದ್ಯಕೀಯ ಸಹಾಯವನ್ನು ಒದಗಿಸುತ್ತಿದೆ. ಸುಮಾರು 7 ಕೋಟಿ ರೂಪಾಯಿ ಮೌಲ್ಯದ ಜೀವರಕ್ಷಕ ಔಷಧಗಳು, ರಕ್ಷಣಾ ವಸ್ತುಗಳು ಮತ್ತು ನಿರ್ಣಾಯಕ ಆರೈಕೆ ಉಪಕರಣಗಳನ್ನು ಒಳಗೊಂಡ ತುರ್ತು ಪರಿಹಾರ ಸಾಮಗ್ರಿಗಳನ್ನು ಟರ್ಕಿಗೆ ಕಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಟ್ವಿಟರ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ,"ವಸುಧೈವ ಕುಟುಂಬಕಂ ಪರಿಕಲ್ಪನೆಯೊಂದಿಗೆ ಭಾರತವು ಸಿರಿಯಾ ಮತ್ತು ಟರ್ಕಿಗೆ ಸಹಾಯ ಮಾಡುತ್ತಿದೆ. ಭಾರತದ ಆರೋಗ್ಯ ಸಚಿವಾಲಯವು ಜೀವ ಉಳಿಸುವ ತುರ್ತು ಔಷಧಗಳು, ರಕ್ಷಣಾ ವಸ್ತುಗಳು, ವೈದ್ಯಕೀಯ ಉಪಕರಣಗಳು, ಕ್ರಿಟಿಕಲ್ ಕೇರ್ ಔಷಧಗಳು ಇತ್ಯಾದಿಗಳನ್ನು ಒದಗಿಸಿದೆ. ಟರ್ಕಿ ಮತ್ತು ಸಿರಿಯಾಕ್ಕೆ ಮಾನವೀಯ ನೆರವು ನೀಡಲು ಭಾರತದ ಪ್ರಯತ್ನಗಳು ಮುಂದುವರೆದಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಟರ್ಕಿ ಬೆನ್ನಲ್ಲೇ ಸಿಕ್ಕೀಂನಲ್ಲೂ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು