ನವದೆಹಲಿ: ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು ಅದರ ಕಂಪನಗಳು ಭಾರತದ ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ. ಗುರುವಾರ ಮಧ್ಯಾಹ್ನ 2.50ಕ್ಕೆ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, ಅದರ ಕಂಪನಗಳು ರಾಷ್ಟ್ರ ರಾಜಧಾನಿ ದೆಹಲಿ, ಗಾಜಿಯಾಬಾದ್, ನೋಯ್ಡಾ, ಫರಿದಾಬಾದ್, ಗುರುಗ್ರಾಮ್, ಪಂಜಾಬ್, ಚಂಡೀಗಢ ಮತ್ತು ಕಾಶ್ಮೀರ ಕಣಿವೆಯಲ್ಲಿ ಅನುಭವವಾಗಿದೆ. ಮನೆಯಲ್ಲಿರುವ ಪೀಠೋಪಕರಣಗಳು ಅಲುಗಾಡಿರುವುದು ಕೂಡ ವರದಿಯಾಗಿದೆ.
ಆಫ್ಘನ್ ಮತ್ತು ಭಾರತದ ಹೊರತಾಗಿ ಲಾಹೋರ್, ಇಸ್ಲಾಮಾಬಾದ್, ಖೈಬರ್ ಪಖ್ತುಂಖ್ವಾ ಸೇರಿ ಪಾಕಿಸ್ತಾನದ ಇತರ ನಗರಗಳಲ್ಲಿಯೂ ಭೂಕಂಪದ ಅನುಭವವಾಗಿದೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟು ದಾಖಲಾಗಿದೆ. ಭೂಕಂಪ ಸಂಭವಿಸಿದ ತಕ್ಷಣ ಮನೆ, ಕಚೇರಿಯಿಂದ ಜನರು ಹೊರಗಡೆ ಓಡಿ ಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣ - ಹಾನಿ ಆದ ಬಗ್ಗೆ ವರದಿ ಆಗಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಾಗರಿಕರು ಜಾಗೃತರಾಗುವಂತೆ ಮನವಿ ಮಾಡಿದ್ದಾರೆ. ಆರಂಭಿಕ ಭೂಕಂಪದ ಆಳವು, ಅವುಗಳ ಪ್ರಭಾವ ಕಡಿಮೆಗೊಳಿಸಬಹುದಾದರೂ, ನಂತರ ಹೆಚ್ಚಾಗಬಹುದು. ಇಲ್ಲಿಯವರೆಗೆ, ಯಾವುದೇ ಸಾವು - ನೋವುಗಳ ಬಗ್ಗೆ ವರದಿಗಳಿಲ್ಲ. ಆದರೂ, ಪರಿಸ್ಥಿತಿ ಅರಿಯುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಹವಾಮಾನ ಇಲಾಖೆ ಪ್ರಕಾರ, ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಭೂಕಂಪದ ಕೇಂದ್ರ ಬಿಂದುವಾಗಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.