ಬಿಕಾನೇರ್(ರಾಜಸ್ಥಾನ):ಉತ್ತರಾಖಂಡದ ಜೋಶಿಮಠದಲ್ಲಿ ಭೂಕಂಪನದಿಂದಾಗಿ ಇಡೀ ಪ್ರದೇಶವೇ ಅಪಾಯಕ್ಕೀಡಾದ ಮಧ್ಯೆಯೇ ರಾಜಸ್ಥಾನದಲ್ಲಿ ಭೂಕಂಪನದ ಅನುಭವ ಉಂಟಾಗಿದೆ. ಇಂದು ಮಧ್ಯಾಹ್ನ 1:42ರ ಸುಮಾರಿಗೆ ಪ್ರಬಲ ಕಂಪನ ಉಂಟಾಗಿದ್ದರಿಂದ ಜನರು ಭಯಭೀತರಾಗಿ ಮನೆ, ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬಿಕಾನೇರ್‌ನಲ್ಲಿ ಸಂಭವಿಸಿದ ಭೂಮಿ ನಡುಗಿಸಿದ ಕಂಪನಗಳ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಯಾವುದೇ ನಿಖರ ಮಾಹಿತಿ ನೀಡಿಲ್ಲ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಕಾನೇರ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಆಗ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.1 ಇತ್ತು. ಭೂಕಂಪದ ಕೇಂದ್ರಬಿಂದು 10 ಕಿ.ಮೀ ಆಳದಲ್ಲಿ ಕಂಡುಬಂದಿತ್ತು. ಇಂದು ಭೂಕಂಪನ ಉಂಟಾದ ಬಳಿಕ ಜನರು ತಮ್ಮ ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು.
ಅಕ್ಟೋಬರ್‌ನಲ್ಲೂ ಕಂಪಿಸಿದ್ದ ಭೂಮಿ:ಅಕ್ಟೋಬರ್ 17 ರಂದು ರಾಜಸ್ಥಾನದ ಬಿಕಾನೇರ್ ಮತ್ತು ಶ್ರೀಗಂಗಾನಗರದಲ್ಲಿ ಭೂಮಿ ನಡುಗಿತ್ತು. ರಾಜಧಾನಿ ಜೈಪುರದಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.6 ರಷ್ಟು ದಾಖಲಾಗಿತ್ತು. ಮಧ್ಯಾಹ್ನ 12.36 ರ ಸುಮಾರಿಗೆ ಬಿಕಾನೇರ್‌ನ ಟೊಂಕ್, ಬುಂಡಿವರೆಗೆ ಈ ಅನುಭವ ಉಂಟಾಗಿದೆ.
6 ರ ತೀವ್ರತೆಯ ಭೂಕಂಪನ ಅಪಾಯಕಾರಿ:ಭೂವಿಜ್ಞಾನಿಗಳ ಪ್ರಕಾರ ಭೂಕಂಪಗಳಿಗೆ ನಿಜವಾದ ಕಾರಣವೆಂದರೆ ಟೆಕ್ಟೋನಿಕ್ ಪ್ಲೇಟ್‌ಗಳ ತ್ವರಿತ ಚಲನೆ. ಇದಲ್ಲದೆ, ಉಲ್ಕೆಯ ಪ್ರಭಾವ ಮತ್ತು ಜ್ವಾಲಾಮುಖಿ ಸ್ಫೋಟ, ಗಣಿ ಪರೀಕ್ಷೆ ಮತ್ತು ಪರಮಾಣು ಪರೀಕ್ಷೆಯಿಂದಲೂ ಭೂಕಂಪನಗಳು ಸಂಭವಿಸುತ್ತವೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ ಅಳೆಯಲಾಗುತ್ತದೆ. 2.0 ಅಥವಾ 3.0 ತೀವ್ರತೆಯ ಭೂಕಂಪವು ಸೌಮ್ಯವಾಗಿರುತ್ತದೆ. ಆದರೆ 6 ರ ತೀವ್ರತೆ ಎಂದರೆ ಶಕ್ತಿಯುತವಾಗಿರುತ್ತದೆ.
ಇದರಿಂದ ಸಂಭವಿಸುವ ಪ್ರಮಾದಗಳು ಹೆಚ್ಚಾಗಿರುತ್ತವೆ. ಭೂಕಂಪದ ತೀವ್ರತೆಯನ್ನು ಭೂಗರ್ಭದ ಆಳದಲ್ಲಿ ಅಂದರೆ ಎಪಿಸೆಂಟರ್ನಲ್ಲಿ ಹೊರಹೊಮ್ಮುವ ಶಕ್ತಿಯ ಅಲೆಗಳಿಂದ ಅಂದಾಜಿಸಲಾಗುತ್ತದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದಲ್ಲಿ ಇದನ್ನು ದಾಖಲಿಸಲಾಗುತ್ತದೆ. ಅಲೆಗಳು ನೂರಾರು ಕಿಲೋಮೀಟರ್‌ಗಳವರೆಗೆ ಹರಡುತ್ತವೆ. ಇದು ಕಂಪನ ಸೃಷ್ಟಿಸಿ, ಭೂಮಿಯಲ್ಲಿ ಬಿರುಕುಗಳನ್ನು ಉಂಟು ಮಾಡುತ್ತದೆ.
ಉತ್ತರಾಖಂಡದಲ್ಲಿ ನಿನ್ನೆ ನಡುಗಿದ್ದ ಭೂಮಿ:ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 8.58 ರ ಸುಮಾರಿಗೆ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪನದಲ್ಲಿ 3.8 ತೀವ್ರತೆ ದಾಖಲಾಗಿದೆ. ಭೂಕಂಪನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ವರದಿ ತಿಳಿಸಿತ್ತು.
ಪಿಥೋರಗಡ್, ಬಾಗೇಶ್ವರ್, ಉತ್ತರಕಾಶಿ, ಚಮೋಲಿ ಮತ್ತು ರುದ್ರಪ್ರಯಾಗ ಈ ಜಿಲ್ಲೆಗಳು ಭೂಕಂಪನ ವಲಯ-Vರ ಅಡಿಯಲ್ಲಿ ಬರುತ್ತವೆ. ಕಳೆದ ಡಿಸೆಂಬರ್ನಲ್ಲಿ ಉತ್ತರಕಾಶಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿತ್ತು. 2023ರ ಆರಂಭದಲ್ಲಿ, ಉತ್ತರಾಖಂಡದ ಜೋಶಿಮಠ ತೀವ್ರ ಭೂ ಕುಸಿತಕ್ಕೆ ಸಾಕ್ಷಿಯಾಗಿದೆ. ಜೋಶಿಮಠ ಪಟ್ಟಣದಲ್ಲಿ 9 ಕಡೆ ಭೂ ಕುಸಿತದಿಂದ ಭಾರಿ ನಷ್ಟವನ್ನು ಅನುಭವಿಸುತ್ತಿದೆ. ಅತಿಯಾದ ಚಳಿಯಿಂದಲೂ ಜನರು ಕಷ್ಟಪಡುವಂತಾಗಿದೆ. ಮನೆ ಗೋಡೆಗಳು ಬಿರುಕು ಬಿಟ್ಟಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗುತ್ತಿದೆ.
ಜೋಶಿಮಠದಲ್ಲಿ ನಿರಂತರ ಭೂಕುಸಿತದಿಂದ ಪಟ್ಟಣದ 561 ಮನೆಗಳು ಬಿರಕು ಬಿಟ್ಟಿದೆ ಎಂದು ವರದಿಯಾಗಿದೆ. ರವಿಗ್ರಾಮದಲ್ಲಿ 153 ಮನೆಗಳು, ಗಾಂಧಿನಗರದಲ್ಲಿ 127, ಮನೋಹರ್ಬಾಗ್ನಲ್ಲಿ 71, ಸಿಂಗ್ದಾರ್ನಲ್ಲಿ 52, ಪರ್ಸಾರಿಯಲ್ಲಿ 50, ಸುನೀಲ್ನಲ್ಲಿ 27, ಮಾರ್ವಾಡಿಯಲ್ಲಿ 28, ವಿವಿಧ ಪ್ರದೇಶದಲ್ಲಿ 24 ಸೇರಿದಂತೆ ಒಟ್ಟು 561 ಮನೆಗಳು ಬಿರುಕು ಬಿಟ್ಟಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಮನೆಗಳಲ್ಲಿ ಬಿರುಕು ಬಿಟ್ಟಿರುವುದರಿಂದ ಸಾಕಷ್ಟು ಕುಟುಂಬಗಳು ವಲಸೆ ಸಹ ಹೋಗಿದ್ದಾರೆ ಎಂದು ವರದಿಯಾಗಿದೆ.
ಓದಿ:ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ.. 3.8 ತೀವ್ರತೆ ದಾಖಲು