ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಭಾನುವಾರ ಭೂಕಂಪನದ ಅನುಭವವಾಗಿದೆ. ಫರಿದಾಬಾದ್‌ನಲ್ಲಿ ಸಂಜೆ 4.08ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 3.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪನದ ಕೇಂದ್ರ ಬಿಂದು ಫರಿದಾಬಾದ್‌ನಿಂದ 9 ಕಿಲೋಮೀಟರ್ ಪೂರ್ವಕ್ಕೆ ಮತ್ತು ದೆಹಲಿಯಿಂದ 30 ಕಿಲೋಮೀಟರ್ ಆಗ್ನೇಯದಲ್ಲಿತ್ತು. 10 ಕಿಲೋ ಆಳದಲ್ಲಿ ಭೂಕಂಪನದ ಬಿಂದು ಇದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಭೂಮಿ ನಡುಗಿದ ಕೂಡಲೇ ಜನರಲ್ಲಿ ಭೀತಿ ಉಂಟಾಗಿತ್ತು. ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಪೀಠೋಪಕರಣಗಳ ತೀವ್ರವಾಗಿ ಅಲುಗಾಡಲು ಆರಂಭಿಸಿತು ಎಂದು ವರದಿಯಾಗಿದೆ.
ವಸತಿ ಕಟ್ಟಡಗಳಿಂದ ಜನರು ಹೊರ ಓಡಿ ಬರುತ್ತಿರುವ ದೃಶ್ಯಗಳನ್ನು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ಮಧ್ಯಾಹ್ನದ ಹೊತ್ತು ಮಲಗಿದ್ದರೂ ಭೂಮಿ ನಡುಗಿದ ಅನುಭವದಿಂದ ದಿಢೀರ್ ಎಚ್ಚರಗೊಂಡಿದ್ದಾರೆ. ''ನಾನು ಮಲಗಿದ್ದೆ. ಏಕಾಏಕಿ ಯಾರೋ ನನ್ನ ಬೆಡ್ ಮೇಲೆ ಹತ್ತಿದ ಭಾಸವಾಯಿತು. ಇದರಿಂದ ಎಚ್ಚರವಾಗದಾಲೇ ಭೂಮಿ ಕಂಪಿಸಿದ್ದು ಅರಿವಿಗೆ ಬಂತು. ನನ್ನ ಕೊಠಡಿಯಲ್ಲಿನ ಫ್ಯಾನ್ ಹಾಗೂ ವಿದ್ಯುತ್ ದೀಪ ಅಲುಗಾಡುತ್ತಿತ್ತು'' ಎಂದು ನೋಯ್ಡಾದ ನಿವಾಸಿ ಅಶ್ವಿನ್ ಸೆಕ್ಸೇನಾ ತಿಳಿಸಿದರು.
ಜನಸಂದಣಿ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಇಂಡಿಯಾ ಏಕ್ಸ್ಪೋ ಮಾರ್ಟ್ನಲ್ಲಿ ಪಾಲ್ಗೊಂಡಿದ್ದ ಸಂಗೀತಾ ಶರ್ಮಾ, ''ಎಕ್ಸ್ಪೋ ಪ್ರದರ್ಶನದ ಮಾಳಿಗೆಯಲ್ಲಿ ನನಗೆ ನಡುಗಿದ ಅನುಭವವಾಯಿತು. ನನ್ನ ಸಮೀಪದಲ್ಲಿರುವ ಕೆಲವರು ಹೊರಗಿನ ಇತರ ಚಟುವಟಿಕೆಗಳ ಕಾರಣದಿಂದ ಆ ರೀತಿ ಆಗಿರಬಹುದು ಎಂದು ಹೇಳಿದರು. ಆದರೆ, ಬಳಿಕ ನಮಗೆ ಇದು ಭೂಕಂಪ ಎಂಬ ಮಾಹಿತಿ ಸಿಕ್ತು'' ಎಂದರು.