ನವದೆಹಲಿ: ಪಶ್ಚಿಮ ನೇಪಾಳದಲ್ಲಿ ಸೋಮವಾರ ಮತ್ತೆ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲ ಕಂಪನದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇಂದು ಸಂಜೆ 4:16ಕ್ಕೆ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ.
ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.6 ತೋರಿಸಿದೆ. ಆದರೆ, ಅಧಿಕಾರಿಗಳು ಅಧಿಕೃತವಾಗಿ ಇನ್ನು ದೃಢಪಡಿಸಿಲ್ಲ. ರಾಜಧಾನಿಯ ಕೆಲವು ಪ್ರದೇಶದಲ್ಲಿ ಪೀಠೋಪಕರಣಗಳ ಅಲುಗಾಡುವಿಕೆ ಕಂಡು ಬಂದಿದೆ. ಜನರು ವಸತಿ ಕಟ್ಟಡಗಳಿಂದ ಹೊರಬರುವ ದೃಶ್ಯಗಳನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶುಕ್ರವಾರ ರಾತ್ರಿಯೂ ದೆಹಲಿ - ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಅಂದೇ ಉತ್ತರಪ್ರದೇಶ ರಾಜಧಾನಿ ಲಖನೌ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಧ್ಯಾಹ್ನ 2:53ರ ಸುಮಾರಿಗೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಡು ಬಂದಿತ್ತು. ಸದ್ಯದ ಮಾಹಿತಿ ಪ್ರಕಾರ ಅದೃಷ್ಟವಶಾತ್ ದೇಶದಲ್ಲಿ ಸಂಭವಿಸಿದ ಈ ಭೂಕಂಪದಿಂದ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ತತ್ತರಿಸಿರುವ ಜನತೆಗೆ ಪದೇ ಪದೆ ಭೂಕಂಪದ ಆತಂಕವೂ ಹೆಚ್ಚಾಗುತ್ತಿದೆ.