ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಎರಡು ಜಿಲ್ಲೆಗಳಲ್ಲಿ ಭೂಮಿ ಮತ್ತೊಮ್ಮೆ ಕಂಪಿಸಿದೆ. ಚಮೋಲಿ ಮತ್ತು ಪಿಥೋರಗಢ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದೆ.
ಚಮೋಲಿಯಲ್ಲಿ ಭೂಕಂಪನ: ಜಿಲ್ಲೆಯ ಜನತೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಭೂಕಂಪದ ಕೇಂದ್ರ ಬಿಂದು 22 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಚಮೋಲಿಯಲ್ಲಿ ಭೂಕಂಪನದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.6 ಎಂದು ಅಳೆಯಲಾಗಿದ್ದು, ಇಂದು ಬೆಳಗ್ಗೆ 5.43ಕ್ಕೆ ಭೂಕಂಪ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಪಿಥೋರಗಢದಲ್ಲೂ ಭೂಕಂಪ:ಉತ್ತರಾಖಂಡದ ಮತ್ತೊಂದು ಸೂಕ್ಷ್ಮ ಜಿಲ್ಲೆ ಪಿಥೋರಗಢದಲ್ಲೂ ಭೂಕಂಪ ಸಂಭವಿಸಿದೆ. ಮುಂಜಾನೆ 3.18ಕ್ಕೆ ಇಲ್ಲಿ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಥೋರಗಢದಲ್ಲಿ ಭೂಕಂಪದ ತೀವ್ರತೆ 2.9 ಆಗಿದೆ. ಇಲ್ಲಿ ಭೂಕಂಪದ ಆಳ 20 ಕಿಲೋಮೀಟರ್ ಆಗಿದೆ. ಪಿಥೋರಗಢನಲ್ಲಿಯೂ ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಸುದ್ದಿಯಿಲ್ಲ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನಡುಗಿದ ಭೂಮಿ:ಭಾರತದ ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲೂ ಭೂಕಂಪನದ ಅನುಭವವಾಗಿದೆ. ಅಫ್ಘಾನಿಸ್ತಾನದಲ್ಲಿ ಬೆಳಗ್ಗೆ 7.08ಕ್ಕೆ 4.4 ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಇಲ್ಲಿ ಭೂಕಂಪದ ಬಿಂದು 158 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಪಾಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ 4 ತೀವ್ರತೆಯ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲಿ ಮುಂಜಾನೆ 3.13ಕ್ಕೆ ಭೂಮಿ ಕಂಪಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಸೂಕ್ಷ್ಮ ವಲಯ ಐದರಲ್ಲಿವೆ ಚಮೋಲಿ ಮತ್ತು ಪಿಥೋರಗಢ: ಉತ್ತರಾಖಂಡದ ಚಮೋಲಿ ಮತ್ತು ಪಿಥೋರಗಢ ಜಿಲ್ಲೆಗಳು ಅತ್ಯಂತ ಸೂಕ್ಷ್ಮ ಜಿಲ್ಲೆಗಳಾಗಿವೆ. ಈ ಎರಡೂ ಜಿಲ್ಲೆಗಳು ವಲಯ ಐದರಲ್ಲಿ ಬರುತ್ತವೆ. ಇಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. ಅಷ್ಟೇ ಅಲ್ಲ, ಈ ಎರಡೂ ಜಿಲ್ಲೆಗಳು ಉತ್ತರಾಖಂಡದ ಗುಡ್ಡಗಾಡು ಜಿಲ್ಲೆಗಳಾಗಿವೆ. ಹಿಮಾಲಯದಲ್ಲಿ ನೆಲೆಗೊಂಡಿರುವುದರಿಂದ ಭೂಕಂಪಗಳು ಮತ್ತು ನೈಸರ್ಗಿಕ ವಿಕೋಪಗಳಿಗೆ ಇದು ಸೂಕ್ಷ್ಮವಾಗಿರುತ್ತದೆ. ಈ ಬಾರಿಯೂ ಮಳೆಯಿಂದಾಗಿ ಈ ಎರಡು ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದೆ.
ಓದಿ:ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ
ಪಿಥೋರ್ಗಢದಲ್ಲಿ ಈ ಹಿಂದೆ ಸಂಭವಿಸಿತ್ತು ಭೂಕಂಪ:ಆಗಸ್ಟ್ 3ರ ಬೆಳಗ್ಗೆ ಭಾರತ ನೇಪಾಳ ಗಡಿ ಪ್ರದೇಶ ಪಿಥೋರಗಢದಲ್ಲಿ ಭೂಕಂಪನದ ಅನುಭವವಾಗಿತ್ತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಗುರುವಾರ ಬೆಳಗ್ಗೆ 6.35 ಕ್ಕೆ 2.2 ತೀವ್ರತೆಯ ಭೂಮಿ ಕಂಪಿಸಿದೆ ಎಂದು ಹೇಳಿತ್ತು. ಭೂಕಂಪದ ಕೇಂದ್ರಬಿಂದುವು ಭೂಮಿಯ ಸುಮಾರು 20 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ಆಗಸ್ಟ್ 1 ಮಂಗಳವಾರ ಬೆಳಗ್ಗೆ 8.31ಕ್ಕೆ ಪಿಥೋರಗಢದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು.