ಚೆಂಗಲ್ಪಟ್ಟು (ತಮಿಳುನಾಡು): ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಹಿನ್ನೆಲೆ ತಮಿಳುನಾಡಿನಲ್ಲಿ ಮಿಚೌಂಗ್ ಚಂಡಮಾರುತ ಅಬ್ಬರಿಸಿತ್ತು. ತಮಿಳುನಾಡಿನ ಹಲವೆಡೆ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಅದರಲ್ಲೂ, ಚೆನ್ನೈನಂತಹ ಮಹಾನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರ ಚಿಂತೆಗೆ ಕಾರಣವಾಗಿತ್ತು. ಪ್ರವಾಹ ಪರಿಸ್ಥಿತಿ ಸುಧಾರಿಸಿದ ಬೆನ್ನಲ್ಲೇ ತಮಿಳು ಪ್ರದೇಶದಲ್ಲಿ ಭೂಕಂಪನದ ಬಿಸಿ ತಾಗಿದೆ. ಕರ್ನಾಟಕದ ವಿಜಯಪುರದಲ್ಲಿಯೂ ಭೂಕಂಪ ಸಂಭವಿಸಿದೆ
ಹೌದು ಇಂದು ಬೆಳಗ್ಗೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಸುಮಾರು 10 ಕಿ.ಮೀ ಪ್ರದೇಶದಲ್ಲಿ ಇಂದು ಬೆಳಗ್ಗೆ 07: 39ರ ಸುಮಾರಿಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ.
ಇಂದು ಬೆಳಗ್ಗೆ 7.40ರ ಸುಮಾರಿಗೆ ಅಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ ವಿನ್ನಮಂಗಲಂ, ಪೆರಿಯಂಕುಪ್ಪಂ, ಚಂದೋರ್ಕುಪ್ಪಂ, ಕರುಂಬೂರು, ಆಲಂಕುಪ್ಪಂ, ಪಾಲೂರು ಸೇರಿದಂತೆ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ಸ್ಥಳಗಳು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿವೆ.
ವಿಜಯಪುರ, ಗುಜರಾತ್ನಲ್ಲೂ ಕಂಪಿಸಿದ ಭೂಮಿ:ಅಲ್ಲದೇ, ಇಂದು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲೂ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ವಿಜಯಪುರ ಅಷ್ಟೇ ಅಲ್ಲ ಗುಜರಾತ್ನಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ಕಚ್ನಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಹೇಳಿದೆ.