ಪಿಥೋರ್ಗಢ್ (ಉತ್ತರಾಖಂಡ):ಇಂದು ಬೆಳಗ್ಗೆ ಭಾರತ ನೇಪಾಳ ಗಡಿ ಪ್ರದೇಶ ಪಿಥೋರಗಢದಲ್ಲಿ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಗುರುವಾರ ಬೆಳಗ್ಗೆ 6.35 ಕ್ಕೆ 2.2 ತೀವ್ರತೆಯ ಭೂಮಿ ಕಂಪಿಸಿದೆ ಎಂದು ಹೇಳಿದೆ. ಭೂಕಂಪದ ಕೇಂದ್ರಬಿಂದುವು ಭೂಮಿಯ ಸುಮಾರು 20 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ 8.31ಕ್ಕೆ ಪಿಥೋರಗಢದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕಳೆದ 38 ದಿನಗಳಲ್ಲಿ 9ನೇ ಬಾರಿಗೆ ಭೂಕಂಪನದ ಅನುಭವವಾಗಿದೆ. ಇಂದು ಮುಂಜಾನೆ 4.17 ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಅಂಡಮಾನ್ ದ್ವೀಪದಲ್ಲಿ ಭೂಕಂಪದ ಕೇಂದ್ರಬಿಂದು ಮೇಲ್ಮೈಯಿಂದ 61 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ನಿಕೋಬಾರ್ ದ್ವೀಪದಲ್ಲಿ ಇಂದು ಬೆಳಗ್ಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ.
ಕಳೆದ 38 ದಿನಗಳಲ್ಲಿ ಈ ಪ್ರದೇಶದಲ್ಲಿ ನಿರಂತರ ಭೂಕಂಪಗಳು ದಾಖಲಾಗಿವೆ. ಎನ್‌ಸಿಎಸ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಜುಲೈ 29 ರಂದು 5.8 ಪ್ರಮಾಣ, ಜುಲೈ 13 ರಂದು 4.3 ಪ್ರಮಾಣ, ಜುಲೈ 9 ರಂದು ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ 5.3 ಪ್ರಮಾಣ, ಜುಲೈ 1 ರಂದು ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ 5.8 ತೀವ್ರತೆ, ಜೂನ್ 26, ರಂದು ಮೂರು ಬಾರಿ ಭೂಮಿ ಕಂಪಿಸಿದೆ. ಅಂಡಮಾನ್ ದ್ವೀಪದಲ್ಲಿ 4.4 ತೀವ್ರತೆಯ, ಅರ್ಧ ಘಂಟೆಯ ಬಳಿಕ, ನಿಕೋಬಾರ್ ದ್ವೀಪದಲ್ಲಿ 4.4 ಮತ್ತು ಮತ್ತೆ ಅಂಡಮಾನ್ ದ್ವೀಪದಲ್ಲಿ 4.1 ರ ತೀವ್ರತೆಯ ಭೂಕಂಪನ ಸಂಭವಿಸಿತ್ತು.