ನವದೆಹಲಿ: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಕಳೆದ ರಾತ್ರಿ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪನ ವರದಿಯಾಗಿದೆ. ರಾತ್ರಿ 11.01 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. 20 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. ಭೂಮಿ ದಿಢೀರ್ ಕಂಪಿಸಿದ್ದರಿಂದ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಕುರಿತು ವರದಿಯಾಗಿಲ್ಲ.
ಅಂಡಮಾನ್ ಸಮುದ್ರದಲ್ಲಿ ಭೂಕಂಪನ:ಇಂದು ಮುಂಜಾನೆ ಅಂಡಮಾನ್ ಸಮುದ್ರದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ನಸುಕಿನ ಜಾವ 3.39 ರ ಸುಮಾರಿಗೆ ಕಂಪನವಾಗಿದೆ. 93 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ತಿಳಿಸಿದೆ.
ಇಂಡೋನೇಷ್ಯಾದಲ್ಲಿ ಮತ್ತೆ ನಡುಗಿದ ಭೂಮಿ: ಇಂಡೋನೇಷ್ಯಾದಲ್ಲಿ ಸೋಮವಾರ ಸಂಜೆ ಭಾರಿ ಪ್ರಮಾಣದ ಭೂಕಂಪನ ಉಂಟಾಗಿದೆ. ಟೆರ್ನೇಟ್‌ನಲ್ಲಿ ಜನರಿಗೆ ಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ದಾಖಲಾಗಿದೆ. ಸುನಾಮಿ ಅಪಾಯವಿಲ್ಲ ಎಂದು ಹೇಳಲಾಗಿದೆ. ಯಾವುದೇ ಹಾನಿ ಅಥವಾ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಇಂಡೋನೇಷ್ಯಾವು 'ಪೆಸಿಫಿಕ್ ರಿಂಗ್ ಆಫ್ ಫೈರ್' ವಲಯದಲ್ಲಿದೆ. ಈ ಪ್ರದೇಶ ಹಲವಾರು ಟೆಕ್ಟೋನಿಕ್ ಪ್ಲೇಟ್‌ಗಳ ಮೇಲಿರುವ ಕಾರಣ ಇಲ್ಲಿ ಆಗಾಗ್ಗೆ ಭೂಕಂಪನಗಳು ನಡೆಯುತ್ತಿವೆ.
ಮೊರಾಕ್ಕೊ- ಸಾವಿನ ಸಂಖ್ಯೆ 2,800ಕ್ಕೇರಿಕೆ:ಇನ್ನು, ಆಫ್ರಿಕಾ ಖಂಡದ ಮೊರಾಕ್ಕೊ ದೇಶದಲ್ಲಿ ಇತ್ತೀಚೆಗೆ ಜರುಗಿದ ಪ್ರಬಲ ಭೂಕಂಪನದಲ್ಲಿ ಸಾವಿನ ಸಂಖ್ಯೆ 2,800ಕ್ಕೇರಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿವೆ. ಸ್ಪೇನ್, ಕತಾರ್, ಬ್ರಿಟನ್, ಇಸ್ರೇಲ್ ಮತ್ತು ಯುಎಇ ದೇಶಗಳ ಭಾಗವಹಿಸುವಿಕೆಯೊಂದಿಗೆ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಕಳೆದ ಶುಕ್ರವಾರ ರಾತ್ರಿ ಸಂಭವಿಸಿದ ಭೂಕಂಪನದಲ್ಲಿ ಸಾವಿನ ಸಂಖ್ಯೆ 2,862ಕ್ಕೆ ಏರಿಕೆಯಾಗಿದ್ದು, 2,562 ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ಮೊರಾಕ್ಕೊ ಭೂಕಂಪನ: ಸಾವಿನ ಸಂಖ್ಯೆ 2,000ಕ್ಕೇರಿಕೆ, 3 ದಿನ ರಾಷ್ಟ್ರೀಯ ಶೋಕಾಚರಣೆ